ಹಳೆ ಹುಬ್ಬಳ್ಳಿಯ ಅಯೋಧ್ಯಾ ನಗರದಲ್ಲಿ ಗ್ಯಾಸ್ ಲೀಕ್ನಿಂದ ಸಿಲಿಂಡರ್ ಬ್ಲಾಸ್ಟ್ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಹುಬ್ಬಳ್ಳಿ: ಗ್ಯಾಸ್ ಲೀಕ್ನಿಂದ ಸಿಲಿಂಡರ್ ಬ್ಲಾಸ್ಟ್ ಸಂಭವಿಸಿ ಇಬ್ಬರು ಮೃತಪಟ್ಟಿದ್ದು, ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಳೆ ಹುಬ್ಬಳ್ಳಿಯ ಅಯೋಧ್ಯಾ ನಗರದಲ್ಲಿ ನಡೆದಿದೆ.
ಮೃತರನ್ನು 40 ವರ್ಷದ ಮೋಹನ್ ಕಲಾಲ್ ಹಾಗೂ 46 ವರ್ಷದ ಪ್ರವೀಣ್ ಕಲಾಲ್ ಎಂದು ಗುರುತಿಸಲಾಗಿದೆ. ಸಿಲಿಂಡರ್ ಸ್ಫೋಟದ ಪರಿಣಾಮ ಪ್ರವೀಣ್ ಕಲಾಲ್ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮೋಹನ್ ಕಲಾಲ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಸುಮನ ಕಲಾಲ್ ಎಂಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹುಬ್ಬಳ್ಳಿಯ KIMS ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ಯಾಸ್ ಲೀಕ್ನಿಂದ ಅಗ್ನಿ ಅವಘಡ ಸಂಭವಿಸಿ ಸಿಲಿಂಡರ್ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ.
ಮೃತ ಪ್ರವೀಣ್ ಕಲಾಲ್ ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಘಟನೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.