ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ನವಾಬ್ ನಗರದಲ್ಲಿ ಬಸ್‌ಗಾಗಿ ವಿದ್ಯಾರ್ಥಿಗಳು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.


ಹಾವೇರಿ: ಜಿಲ್ಲೆಯ ಸವಣೂರು ಪಟ್ಟಣದ ಹೊರವಲಯದಲ್ಲಿರುವ ನವಾಬ್ ನಗರದಲ್ಲಿ ಬಸ್‌ಗಾಗಿ ವಿದ್ಯಾರ್ಥಿಗಳ ಪರದಾಟ ಮುಂದುವರಿದಿದೆ. ಶಾಲಾ-ಕಾಲೇಜುಗಳಿಗೆ ತೆರಳಲು ನೂರಾರು ವಿದ್ಯಾರ್ಥಿಗಳು ಪ್ರತಿದಿನ ಗಂಟೆಗಟ್ಟಲೆ ಬಸ್‌ಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.


ಗದಗ್ ಮಾರ್ಗವಾಗಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ನವಾಬ್ ನಗರದಲ್ಲಿ ಕೋರಿಕೆಯ ನಿಲುಗಡೆ ಇದ್ದರೂ, ಬಸ್‌ಗಳು ನಿಲ್ಲಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಸಮಯಕ್ಕೆ ಬಸ್ ಸಿಗದ ಕಾರಣ ತರಗತಿಗಳಿಗೆ ತಡವಾಗುವ ಆತಂಕ ವಿದ್ಯಾರ್ಥಿಗಳನ್ನು ಕಾಡುತ್ತಿದೆ.


ಇನ್ನು ಮಹಿಳಾ ವಿದ್ಯಾರ್ಥಿಗಳು ಸುರಕ್ಷತೆಯ ಆತಂಕದ ನಡುವೆಯೇ ಬಸ್‌ಗಾಗಿ ಕಾಯಬೇಕಾದ ಪರಿಸ್ಥಿತಿ ಇದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಾರಿಗೆ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ, ನವಾಬ್ ನಗರದಲ್ಲಿ ಬಸ್ ನಿಲುಗಡೆಯನ್ನು ಖಚಿತಪಡಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.


ಒಟ್ಟಿನಲ್ಲಿ, ನವಾಬ್ ನಗರದ ವಿದ್ಯಾರ್ಥಿಗಳ ಬಸ್ ಸಮಸ್ಯೆಗೆ ಸಾರಿಗೆ ಇಲಾಖೆ ಯಾವಾಗ ಪರಿಹಾರ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.