Hassan ನಗರದ ವಿಶ್ವಕರ್ಮ ವೃತ್ತದಲ್ಲಿ ಸ್ಕೂಟರ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಲಿಖಿತಾ (18) ಮೃತಪಟ್ಟಿದ್ದಾರೆ.

Hassan : ನಗರದ ವಿಶ್ವಕರ್ಮ ವೃತ್ತದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೃತಪಟ್ಟಿದ್ದು, ಮತ್ತೋರ್ವ ವಿದ್ಯಾರ್ಥಿನಿ ಗಾಯಗೊಂಡಿರುವ ಘಟನೆ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು 18 ವರ್ಷದ ಲಿಖಿತಾ ಎಂದು ಗುರುತಿಸಲಾಗಿದೆ. ಚಿನ್ಮಯಿ ಎಂಬ ವಿದ್ಯಾರ್ಥಿನಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಕಾಲೇಜು ಮುಗಿಸಿ ಮನೆಗೆ ತೆರಳಿದ್ದ ಲಿಖಿತಾ ಬಳಿಕ ಗೆಳತಿ ಚಿನ್ಮಯಿಯ ಸ್ಕೂಟರ್‌ನಲ್ಲಿ ನಗರಕ್ಕೆ ತೆರಳಿದ್ದರು. ಹಾಸನದ ಬಸ್ ನಿಲ್ದಾಣದ ಕಡೆಯಿಂದ ಡೈರಿ ಕಡೆಗೆ ಸ್ಕೂಟರ್ ತಿರುಗಿಸುತ್ತಿದ್ದ ವೇಳೆ ವೇಗವಾಗಿ ಬಂದ ಲಾರಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ.


ಅಪಘಾತದ ಬಳಿಕ ಸ್ಥಳೀಯರು ಲಾರಿ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಲಕ ಪಾನಮತ್ತನಾಗಿದ್ದ ಎನ್ನುವುದು ಸ್ಥಳೀಯರ ಆರೋಪವಾಗಿದ್ದು, ಇದರ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಬೇಕಿದೆ.

ನಗರದೊಳಗೆ ಭಾರಿ ವಾಹನಗಳ ಸಂಚಾರ, ಸೂಕ್ತ ಸಂಚಾರ ಫಲಕ ಹಾಗೂ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಕುರಿತು ಕೂಡ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಘಟನೆ ಸಂಬಂಧ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಅಪಘಾತದ ನಿಖರ ಕಾರಣದ ಕುರಿತು ತನಿಖೆ ಮುಂದುವರಿದಿದೆ.