Hassan ಸಕಲೇಶಪುರದಲ್ಲಿ ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ವೆಂಕಟೇಶ್ (55) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಹೃದಯಾಘಾತದಿಂದ ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕರೊಬ್ಬರು ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ.
ಮೃತ ಅಧಿಕಾರಿಯನ್ನು ಡಾ. ವೆಂಕಟೇಶ್ (55) ಎಂದು ಗುರುತಿಸಲಾಗಿದೆ. ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯವರಾದ ಡಾ. ವೆಂಕಟೇಶ್ ಕಳೆದ ಐದಾರು ವರ್ಷಗಳಿಂದ ಸಕಲೇಶಪುರದಲ್ಲಿ ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಡಾ. ವೆಂಕಟೇಶ್ ಅವರ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದ್ದು, ಅವರು ಸಕಲೇಶಪುರದಲ್ಲಿ ಒಬ್ಬರೇ ವಾಸವಾಗಿದ್ದರು. ಸೆಪ್ಟೆಂಬರ್ 10ರಂದು ಎಂದಿನಂತೆ ಕೆಲಸ ಮುಗಿಸಿ ಮನೆಗೆ ತೆರಳಿದ್ದರು.
ಮರುದಿನ ಬೆಳಗ್ಗೆ ಡಾ. ವೆಂಕಟೇಶ್ ಅವರು ಫೋನ್ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಆತಂಕಗೊಂಡವರು ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅವರು ಮನೆಯಲ್ಲೇ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಪ್ರಾಥಮಿಕ ಮಾಹಿತಿಯಂತೆ ಹೃದಯಾಘಾತದಿಂದಲೇ ಡಾ. ವೆಂಕಟೇಶ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕಳೆದ ಹಲವು ವರ್ಷಗಳಿಂದ ಸಕಲೇಶಪುರದಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ. ವೆಂಕಟೇಶ್ ಅವರ ನಿಧನಕ್ಕೆ ಸಹೋದ್ಯೋಗಿಗಳು ಹಾಗೂ ಸ್ಥಳೀಯರು ಸಂತಾಪ ಸೂಚಿಸಿದ್ದು, ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ.