HASANA ದ ಬೇಲೂರು ತಾಲೂಕಿನ ಗಂಗಾವರ ಗ್ರಾಮದಲ್ಲಿ ಇಟಿಎಫ್ ಸಿಬ್ಬಂದಿಯನ್ನು ಒಂಟಿ ಸಲಗ ಅಟ್ಟಾಡಿಸಿದೆ.

HASANA : ಇಟಿಎಫ್ ಸಿಬ್ಬಂದಿಯನ್ನು ಮದದಲ್ಲಿದ್ದ ಒಂಟಿ ಸಲಗವೊಂದು ಅಟ್ಟಾಡಿಸಿದ ಘಟನೆ ಬೇಲೂರು ತಾಲೂಕಿನ ಗಂಗಾವರ ಗ್ರಾಮದಲ್ಲಿ ನಡೆದಿದೆ.

ಕಾಡಾನೆ ರಸ್ತೆ ದಾಟುತ್ತಿದ್ದ ವೇಳೆ ಇಟಿಎಫ್ ಸಿಬ್ಬಂದಿ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿಕೊಂಡು ನಿಂತಿದ್ದರು. ಈ ವೇಳೆ ಏಕಾಏಕಿ ಒಂಟಿ ಸಲಗ ಸಿಬ್ಬಂದಿಯತ್ತ ನುಗ್ಗಿ ಅಟ್ಟಾಡಿಸಿದೆ. ಪರಿಣಾಮ ಇಟಿಎಫ್ ಸಿಬ್ಬಂದಿ ಹಾಗೂ ಸ್ಥಳದಲ್ಲಿದ್ದ ಜನರು ಚೆಲ್ಲಾಪಿಲ್ಲಿಯಾಗಿ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ.

ಕಾಡಾನೆ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಎರಡೂ ಬದಿಗಳಲ್ಲಿ ಸಾರಿಗೆ ಬಸ್, ಅರಣ್ಯ ಇಲಾಖೆ ಜೀಪ್ ಸೇರಿದಂತೆ ಹಲವು ವಾಹನಗಳನ್ನು ನಿಲ್ಲಿಸಲಾಗಿತ್ತು. ಇದೇ ವೇಳೆ ಜನರಿದ್ದ ಕಡೆಗೆ ಒಂಟಿ ಸಲಗ ನುಗ್ಗಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಗ್ರಾಮದ ಶಾಲೆಯ ಮುಂಭಾಗ ಹಾಗೂ ವಾಸದ ಮನೆಗಳ ಮುಂದೆಯೇ ಕಾಡಾನೆ ಸಂಚರಿಸಿದ್ದು, ಆನೆ ಕಂಡು ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ.


ಎರಡು ಕಾಡಾನೆಗಳ ಹಾವಳಿ

ಗಂಗಾವರ ಸುತ್ತಮುತ್ತ ಎರಡು ದೈತ್ಯಾಕಾರದ ಕಾಡಾನೆಗಳು ಮದದಲ್ಲಿದ್ದು, ಅವುಗಳನ್ನು ಕಾಡಿಗಟ್ಟಲು ಇಟಿಎಫ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಗಂಗಾವರ ಸುತ್ತಮುತ್ತಲಿನ ಗ್ರಾಮಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇನ್ನು ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಲು ಇಟಿಎಫ್ ಸಿಬ್ಬಂದಿ ಪಟಾಕಿ ಸಿಡಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಪಟಾಕಿ ಸಿಡಿಸಿದ ಬಳಿಕ ಕಾಡಾನೆಗಳು ಚದುರಿವೆ ಎಂದು ತಿಳಿದುಬಂದಿದೆ.

ಗ್ರಾಮಸ್ಥರಿಗೆ ಎಚ್ಚರಿಕೆ

ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ಹಾಗೂ ಕೂಲಿ ಕಾರ್ಮಿಕರು ಭಯಭೀತರಾಗಿದ್ದಾರೆ. ಕಾಡಾನೆಗಳ ಚಲನವಲನದ ಬಗ್ಗೆ ಇಟಿಎಫ್ ಸಿಬ್ಬಂದಿ ಮೈಕ್ ಮೂಲಕ ನಿರಂತರವಾಗಿ ಅನೌನ್ಸ್ ಮಾಡಿ ಸ್ಥಳೀಯರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.

ಗಂಗಾವರ ಗ್ರಾಮದಲ್ಲಿ ಕಾಡಾನೆಗಳ ಚಲನವಲನ ಮುಂದುವರಿದಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ.