HASANA ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ಹಣದ ವಿಚಾರಕ್ಕೆ ಒಂದೇ ಮನೆಯ ಅಳಿಯಂದಿರ ನಡುವೆ ಗಲಾಟೆ ನಡೆದಿದ್ದು, ಕತ್ತರಿಯಿಂದ ಇರಿತಕ್ಕೊಳಗಾದ ಮಹಮದ್ ಸಿದ್ದಿಕ್ (33) ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
HASANA : ಹಣದ ವಿಚಾರಕ್ಕೆ ಒಂದೇ ಮನೆಯ ಅಳಿಯಂದಿರ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ನಡೆದಿದೆ.
ಮಹಮದ್ ಸಿದ್ದಿಕ್ (33) ಕೊಲೆಯಾದ ವ್ಯಕ್ತಿಯಾಗಿದ್ದು, ಸುಜೀತ್ (29) ಕೊಲೆ ಆರೋಪಿಯಾಗಿದ್ದಾನೆ.
ಒಂದು ವರ್ಷದ ಹಿಂದೆ ದಿವ್ಯಾಳಿಗೆ ಆಕೆಯ ಅಕ್ಕ ರೇಷ್ಮಾ ಅವರು 50 ಸಾವಿರ ರೂಪಾಯಿ ಸಾಲ ನೀಡಿದ್ದರು ಎನ್ನಲಾಗಿದೆ. ಹಣವನ್ನು ವಾಪಸ್ ನೀಡುವಂತೆ ರೇಷ್ಮಾ, ತಂಗಿ ದಿವ್ಯಾಳನ್ನು ಕೇಳಿದ್ದರು. ಇದೇ ಹಣದ ವಿಚಾರವಾಗಿ ರೇಷ್ಮಾ ಪತಿ ಮಹಮದ್ ಸಿದ್ದಿಕ್ ಹಾಗೂ ದಿವ್ಯಾ ಪತಿ ಸುಜೀತ್ ನಡುವೆ ಜಗಳ ಆರಂಭವಾಗಿದೆ.
ಜಗಳ ತಾರಕಕ್ಕೇರಿದ ವೇಳೆ ಸುಜೀತ್ ತನ್ನ ಬಳಿಯಿದ್ದ ಕತ್ತರಿಯಿಂದ ಮಹಮದ್ ಸಿದ್ದಿಕ್ಗೆ ಹಲವು ಬಾರಿ ಇರಿದಿದ್ದಾನೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಮಹಮದ್ ಸಿದ್ದಿಕ್ಗೆ ಅರೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ, ಬಳಿಕ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಪರಿಸ್ಥಿತಿ ಚಿಂತಾಜನಕವಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಮದ್ ಸಿದ್ದಿಕ್ ಸಾವನ್ನಪ್ಪಿದ್ದಾರೆ.
ಘಟನೆ ಸಂಬಂಧ ಅರೇಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.