ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ. ಭಾರತೀಯ ಬ್ಯಾಂಕ್‌ಗಳ ಒಕ್ಕೂಟ (IBA) ಮತ್ತು ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನಡುವೆ ನಡೆದ ಸಭೆ ಯಶಸ್ವಿಯಾಗಿದ್ದು, ಸೆಪ್ಟೆಂಬರ್ 28ರಿಂದ 30ರವರೆಗೆ ನಡೆಯಬೇಕಿದ್ದ ಮೂರು ದಿನಗಳ ದೇಶವ್ಯಾಪಿ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ.


ಬ್ಯಾಂಕ್ ನೌಕರರ ವಿವಿಧ ಬೇಡಿಕೆಗಳ ಹಿನ್ನೆಲೆಯಲ್ಲಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು. ವಾರಕ್ಕೆ ಐದು ದಿನಗಳ ಕೆಲಸ ಜಾರಿ, ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ ನಿಯಮಗಳ ಪರಿಷ್ಕರಣೆ, ಪಿಂಚಣಿ ಹೆಚ್ಚಳ, ನಿವೃತ್ತ ನೌಕರರಿಗೆ ಏಕರೂಪದ ತುಟ್ಟಿಭತ್ಯೆ ಸೇರಿದಂತೆ ಹಲವು ಬೇಡಿಕೆಗಳನ್ನು ನೌಕರರ ಸಂಘಟನೆಗಳು ಮುಂದಿಟ್ಟಿದ್ದವು.


ಇದರ ಜೊತೆಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಬದಲಿಗೆ ಹಳೆಯ ಪಿಂಚಣಿ ಯೋಜನೆ (OPS) ಮರುಸ್ಥಾಪನೆ, ಬಾಕಿ ಇರುವ ವೇತನ ಹಾಗೂ ಸೇವಾ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ನೀಡುವಂತೆಯೂ ನೌಕರರು ಆಗ್ರಹಿಸಿದ್ದರು.


ಮೂರು ದಿನಗಳ ಮುಷ್ಕರ ನಡೆದಿದ್ದರೆ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇತ್ತು. ಅದರಲ್ಲೂ ಬ್ಯಾಂಕುಗಳ ಅರ್ಧವಾರ್ಷಿಕ ಲೆಕ್ಕಪತ್ರ ಮುಕ್ತಾಯದ ಅವಧಿಯಾಗಿರುವುದರಿಂದ ಮುಷ್ಕರವನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರ ಮನವಿ ಮಾಡಿತ್ತು.

IBA ಮತ್ತು UFBU ನಡುವಿನ ಮಾತುಕತೆ ಬಳಿಕ ಮುಷ್ಕರವನ್ನು ಮುಂದೂಡಿರುವುದರಿಂದ ಸದ್ಯ ಬ್ಯಾಂಕ್ ಗ್ರಾಹಕರಿಗೆ ನೆಮ್ಮದಿ ಸಿಕ್ಕಂತಾಗಿದೆ.