ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ 'ಬ್ಲೂ ಪ್ರಿಂಟ್', ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನದ ನಿರೀಕ್ಷೆಯಲ್ಲಿದೆ ಕರಾವಳಿ.

ಕರಾವಳಿ ನಗರಿ ಮಂಗಳೂರಿನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಮಹತ್ವದ ಸಚಿವ ಸಂಪುಟ ಸಭೆ ನಡೆಯುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಜನರ ದಶಕಗಳ ಬೇಡಿಕೆಗಳಿಗೆ ಸರ್ಕಾರದಿಂದ ಭರ್ಜರಿ ಘೋಷಣೆಗಳ ನಿರೀಕ್ಷೆಯಿದೆ.


 ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿರುವ ಈ ಸಭೆಯ ಅಜೆಂಡಾದಲ್ಲಿ ಒಟ್ಟು 16 ಪ್ರಮುಖ ವಿಚಾರಗಳು ಸ್ಥಾನ ಪಡೆದಿವೆ. ಕರಾವಳಿ ಭಾಗದ ಆರ್ಥಿಕ, ಸಾಮಾಜಿಕ ಹಾಗೂ ಕೈಗಾರಿಕಾ ಪ್ರಗತಿಗೆ ವೇಗ ನೀಡಲು ಸರ್ಕಾರವು ಸಮಗ್ರ ಅಭಿವೃದ್ಧಿಯ 'ಬ್ಲೂ ಪ್ರಿಂಟ್' ಬಿಡುಗಡೆ ಮಾಡುವ ಸಾಧ್ಯತೆಯಿದೆ.


ವಿಶೇಷವಾಗಿ ಮೂಲಸೌಕರ್ಯ, ಬಂದರು ವಿಸ್ತರಣೆ, ಮೀನುಗಾರಿಕೆ ಹಾಗೂ ಪ್ರವಾಸೋದ್ಯಮ ವಲಯಕ್ಕೆ ಸಂಬಂಧಿಸಿದ ಪ್ರಮುಖ ಪ್ರಸ್ತಾವನೆಗಳಿಗೆ ಇಂದು ಹಸಿರು ನಿಶಾನೆ ಸಿಗುವ ನಿರೀಕ್ಷೆಯಿದ್ದು, ಕರಾವಳಿಗೆ ವಿಶೇಷ ಪ್ಯಾಕೇಜ್ ಸಿಗುವ ವಿಶ್ವಾಸದಲ್ಲಿ ನಾಗರಿಕರು ಇದ್ದಾರೆ.

 ಸಂಪುಟ ಸಭೆಯ ಮುಂದೆ ಪ್ರವಾಸೋದ್ಯಮ, ಬಂದರು, ಸೇತುವೆ ಹಾಗೂ ಮೂಲಸೌಕರ್ಯಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳು ಅಂತಿಮ ತೀರ್ಮಾನಕ್ಕೆ ಸಜ್ಜಾಗಿವೆ. ಸರ್ಕಾರದ ಅಂತಿಮ ತೀರ್ಮಾನಗಳತ್ತ ಈಗ ಎಲ್ಲರ ಚಿತ್ತ ನೆಟ್ಟಿದೆ.