ಬಹುನಿರೀಕ್ಷಿತ ‘ಬೇಲ್’ ಚಿತ್ರದ ಪ್ರಚಾರಕ್ಕಾಗಿ ಚಿತ್ರದುರ್ಗಕ್ಕೆ ಆಗಮಿಸಿದ್ದ ನಟ ಶಿವರಾಜ್ಕುಮಾರ್ ಅವರ ಎದುರೇ ಪಟಾಕಿ ಬಾಕ್ಸ್ ಸ್ಫೋಟಗೊಂಡಿದೆ.
ಚಿತ್ರದುರ್ಗ: ಬಹುನಿರೀಕ್ಷಿತ ‘ಬೇಲ್’ ಚಿತ್ರದ ಪ್ರಚಾರಕ್ಕಾಗಿ ಕೋಟೆನಾಡು ಚಿತ್ರದುರ್ಗಕ್ಕೆ ಆಗಮಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರಿಗೆ ಅದ್ಧೂರಿ ಸ್ವಾಗತ ನೀಡುವ ವೇಳೆ ಆತಂಕಕಾರಿ ಘಟನೆ ನಡೆದಿದೆ.
ಖಾಸಗಿ ಶೋರೂಂ ಬಳಿ ಅಭಿಮಾನಿಗಳು ಪಟಾಕಿ ಸಿಡಿಸುತ್ತಿದ್ದ ಸಂದರ್ಭದಲ್ಲಿ ಶಿವಣ್ಣ ಅವರ ಎದುರೇ ಪಟಾಕಿ ಬಾಕ್ಸ್ ಸ್ಫೋಟಗೊಂಡಿದೆ. ಪಟಾಕಿಯ ಕಿಡಿಗಳು ಶಿವರಾಜ್ಕುಮಾರ್ ಅವರ ಮೇಲೂ ಬಿದ್ದಿದ್ದು, ಕ್ಷಣಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಶಿವಣ್ಣ ಪಾರಾಗಿದ್ದಾರೆ.
ಇನ್ನು ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದ ಪರಿಣಾಮ ಕೆಲಕಾಲ ನೂಕುನುಗ್ಗಲು ಕೂಡ ಉಂಟಾಯಿತು.
ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ್ಕುಮಾರ್, ಸಿನಿಮಾ ಗೆಲುವಿಗೆ ಬಿಗ್ ಬಜೆಟ್ ಮುಖ್ಯವಲ್ಲ. ಉತ್ತಮ ಕಥೆ ಹಾಗೂ ಕುಟುಂಬ ಸಮೇತವಾಗಿ ನೋಡಬಹುದಾದ ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗಬೇಕು ಎಂದು ಅಭಿಪ್ರಾಯಪಟ್ಟರು.