ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಿವಾಸ ಹಾಗೂ ಕಚೇರಿಗಳ ಮೇಲೆ ನಡೆದ ED ದಾಳಿ ಸೆ.10ರಂದು ಕೂಡ ಮುಂದುವರಿದಿದೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ನಡೆಸುತ್ತಿರುವ ಶೋಧ ಕಾರ್ಯಾಚರಣೆ ಸೆಪ್ಟೆಂಬರ್ 10ರಂದು ಕೂಡ ಮುಂದುವರಿದಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘಿಸಿ ವಿದೇಶದಲ್ಲಿ ಅಕ್ರಮವಾಗಿ ಹಣ ಹೂಡಿಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು 18 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದರು.
ದಾಳಿ ವೇಳೆ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಅಧಿಕಾರಿಗಳು ಸುದೀರ್ಘವಾಗಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಊಟದ ವಿರಾಮದ ಬಳಿಕವೂ ವಿಚಾರಣೆ ಮುಂದುವರಿದಿದ್ದು, ತಡರಾತ್ರಿ 2 ಗಂಟೆಯವರೆಗೆ ಸುಮಾರು 18 ಗಂಟೆಗಳ ಕಾಲ ವಿಚಾರಣೆ ನಡೆದಿತ್ತು ಎನ್ನಲಾಗಿದೆ.
ಬಳಿಕ ತಡರಾತ್ರಿ 3 ಗಂಟೆ ಸುಮಾರಿಗೆ ಸಚಿವರಿಗೆ ನಿದ್ರೆ ಮಾಡಲು ಅಧಿಕಾರಿಗಳು ಅವಕಾಶ ಕಲ್ಪಿಸಿದ್ದರು. ಇದೇ ವೇಳೆ ಇಡಿ ಅಧಿಕಾರಿಗಳ ಮತ್ತೊಂದು ತಂಡ ಅವರ ನಿವಾಸಕ್ಕೆ ಆಗಮಿಸಿ ಶೋಧ ಕಾರ್ಯ ಮುಂದುವರಿಸಿದೆ.
ಸೆಪ್ಟೆಂಬರ್ 9ರ ಮುಂಜಾನೆ 7 ಗಂಟೆಯಿಂದ ಆರಂಭವಾದ ಇಡಿ ದಾಳಿ ಹಾಗೂ ಶೋಧ ಕಾರ್ಯಾಚರಣೆ ಸೆಪ್ಟೆಂಬರ್ 10ರಂದೂ ಮುಂದುವರಿದಿದೆ. ಎಲ್ಲಾ ಸ್ಥಳಗಳಲ್ಲಿನ ಶೋಧ ಪೂರ್ಣಗೊಳ್ಳುವವರೆಗೆ ಇಡಿ ಅಧಿಕಾರಿಗಳು ಸಚಿವರ ನಿವಾಸದಲ್ಲೇ ಇರಲಿದ್ದಾರೆ ಎಂದು ತಿಳಿದುಬಂದಿದೆ.
ಸಂಪೂರ್ಣ ಶೋಧ ಕಾರ್ಯಾಚರಣೆ ಮುಕ್ತಾಯಗೊಂಡ ಬಳಿಕ ಪಂಚನಾಮೆ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ.