ನಟ ದುನಿಯಾ ವಿಜಯ್ ಮತ್ತು ಮೊದಲ ಪತ್ನಿ ನಾಗರತ್ನ ಅವರ ವಿಚ್ಛೇದನ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಇತ್ಯರ್ಥಪಡಿಸಿದೆ.
ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ಮತ್ತು ಅವರ ಮೊದಲ ಪತ್ನಿ ನಾಗರತ್ನ ಅವರ ದಾಂಪತ್ಯ ಜೀವನಕ್ಕೆ ಕಾನೂನಾತ್ಮಕವಾಗಿ ತೆರೆ ಬಿದ್ದಿದೆ. ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ವಿಚ್ಛೇದನ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಇತ್ಯರ್ಥಪಡಿಸಿದ್ದು, ದಂಪತಿಗೆ ವಿಚ್ಛೇದನ ಮಂಜೂರು ಮಾಡಿದೆ.
ಕ್ರೌರ್ಯದ ಆಧಾರದ ಮೇಲೆ ದುನಿಯಾ ವಿಜಯ್ ಹಾಗೂ ನಾಗರತ್ನ ಅವರಿಗೆ ಹೈಕೋರ್ಟ್ ವಿಚ್ಛೇದನ ನೀಡಿದೆ. ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಹಾಗೂ ಶಾಂತಿಭೂಷಣ್ ಅವರ ವಿಭಾಗೀಯ ಪೀಠವು ನಾಗರತ್ನ ಅವರಿಗೆ ₹2 ಕೋಟಿ ಜೀವನಾಂಶ ನೀಡುವಂತೆ ಆದೇಶಿಸಿದೆ.
ಮುಂದಿನ ಮೂರು ತಿಂಗಳೊಳಗೆ ಒನ್ಟೈಮ್ ಸೆಟಲ್ಮೆಂಟ್ ರೂಪದಲ್ಲಿ ನಾಗರತ್ನ ಅವರಿಗೆ ಜೀವನಾಂಶದ ಮೊತ್ತವನ್ನು ಪಾವತಿಸುವಂತೆ ಕೋರ್ಟ್ ಸೂಚಿಸಿದೆ. ಇದೇ ವೇಳೆ ದಂಪತಿಯ ಮೂರು ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ದುನಿಯಾ ವಿಜಯ್ ವಹಿಸಿಕೊಳ್ಳಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
ದುನಿಯಾ ವಿಜಯ್ ಮತ್ತು ನಾಗರತ್ನ ಅವರ ನಡುವಿನ ಕೌಟುಂಬಿಕ ಭಿನ್ನಾಭಿಪ್ರಾಯಗಳು ಈ ಹಿಂದೆ ಪೊಲೀಸ್ ಠಾಣೆ ಹಾಗೂ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದವು. ಈ ಪ್ರಕರಣವು ಹಲವು ವರ್ಷಗಳಿಂದ ನ್ಯಾಯಾಂಗ ಪ್ರಕ್ರಿಯೆಯಲ್ಲಿತ್ತು.
ಈ ಹಿಂದೆ ಕೌಟುಂಬಿಕ ನ್ಯಾಯಾಲಯವು ದುನಿಯಾ ವಿಜಯ್ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿತ್ತು. ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ವಿಜಯ್ ಅವರು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದರು.
ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ದಂಪತಿಗಳು ಮತ್ತೆ ಒಂದಾಗಿ ಜೀವನ ನಡೆಸಲು ಸಾಧ್ಯವಿಲ್ಲ ಎಂಬ ಅಂಶವನ್ನು ಪರಿಗಣಿಸಿ, ಷರತ್ತುಬದ್ಧವಾಗಿ ವಿಚ್ಛೇದನ ಮಂಜೂರು ಮಾಡಿದೆ.
ದುನಿಯಾ ವಿಜಯ್ ಪರ ಹಿರಿಯ ವಕೀಲರಾದ ಎಸ್. ಶ್ರೀವತ್ಸ ಮತ್ತು ಯುಕ್ತ ಅನಿಲ್ ವಾದ ಮಂಡಿಸಿದ್ದರು.
ಈ ತೀರ್ಪಿನೊಂದಿಗೆ ದುನಿಯಾ ವಿಜಯ್ ಮತ್ತು ನಾಗರತ್ನ ಅವರ ಹಲವು ವರ್ಷಗಳ ಕೌಟುಂಬಿಕ ಹಾಗೂ ಕಾನೂನು ಹೋರಾಟಕ್ಕೆ ಅಂತಿಮ ತೆರೆ ಬಿದ್ದಂತಾಗಿದೆ.