ಅಜಯ್ ದೇವಗನ್ ಅಭಿನಯದ ‘ದೃಶ್ಯಂ 3’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ದಾಖಲೆ ಬರೆದಿದೆ.

ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ ಬಹುನಿರೀಕ್ಷಿತ ಕ್ರೈಮ್ ಥ್ರಿಲ್ಲರ್ ‘ದೃಶ್ಯಂ 3: ದಿ ಕನ್‌ಕ್ಲೂಷನ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದೆ. ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲಿ ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ₹272.80 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.


ಭಾರತದಲ್ಲಿ ಮೊದಲ ಮೂರು ದಿನಗಳಲ್ಲಿ ಸಿನಿಮಾ ₹176.50 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಈ ಮೂಲಕ ‘ದೃಶ್ಯಂ’ ಫ್ರಾಂಚೈಸಿಯ ಹಿಂದಿನ ಭಾಗಗಳ ಆರಂಭಿಕ ದಾಖಲೆಗಳನ್ನು ಚಿತ್ರ ಹಿಂದಿಕ್ಕಿದೆ.

ಸ್ಯಾಕ್ನಿಲ್ಕ್ ವರದಿ ಪ್ರಕಾರ, ಮೊದಲ ದಿನ ಭಾರತದಲ್ಲಿ ₹62 ಕೋಟಿ, ಎರಡನೇ ದಿನ ₹53.50 ಕೋಟಿ ಹಾಗೂ ಮೂರನೇ ದಿನ ₹61 ಕೋಟಿ ನೆಟ್ ಕಲೆಕ್ಷನ್ ಮಾಡಿದೆ. ಮೂರನೇ ದಿನವೂ ₹61 ಕೋಟಿ ಕಲೆಕ್ಷನ್ ಮಾಡುವ ಮೂಲಕ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತನ್ನ ವೇಗವನ್ನು ಮುಂದುವರಿಸಿದೆ.


ಗಾಂಧಿ ಜಯಂತಿಯಂದು ಬಿಡುಗಡೆಯಾದ ‘ದೃಶ್ಯಂ 3’ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಜಾಗತಿಕವಾಗಿ ಸಿನಿಮಾ ₹300 ಕೋಟಿ ಕ್ಲಬ್ ಸೇರುವತ್ತ ಮುನ್ನಡೆಯುತ್ತಿದೆ.

ಅಭಿಷೇಕ್ ಪಾಠಕ್ ನಿರ್ದೇಶನದ ಈ ಚಿತ್ರದಲ್ಲಿ ಅಜಯ್ ದೇವಗನ್ ಮತ್ತೊಮ್ಮೆ ವಿಜಯ್ ಸಲ್ಗಾಂವ್ಕರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರಿಯಾ ಶರಣ್, ಟಬು ಹಾಗೂ ಇಶಿತಾ ದತ್ತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಪ್ರಕಾಶ್ ರಾಜ್ ಮತ್ತು ಜೈದೀಪ್ ಅಹ್ಲಾವತ್ ಹೊಸ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.


ಚಿತ್ರದ ಕಥೆ ಮತ್ತು ಕ್ಲೈಮ್ಯಾಕ್ಸ್ ಕುರಿತು ಪ್ರೇಕ್ಷಕರಲ್ಲಿ ಕುತೂಹಲ ಮೂಡಿದ್ದು, ಮುಂದಿನ ದಿನಗಳಲ್ಲಿ ‘ದೃಶ್ಯಂ 3’ ಬಾಕ್ಸ್ ಆಫೀಸ್‌ನಲ್ಲಿ ಇನ್ನಷ್ಟು ದಾಖಲೆಗಳನ್ನು ನಿರ್ಮಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.