ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ದಂಪತಿ ಗಣೇಶ ಚತುರ್ಥಿಯಂದು ತಮ್ಮ ಮಗನ ಹೆಸರನ್ನು ರಿವೀಲ್ ಮಾಡಿದ್ದಾರೆ. 

ಸ್ಯಾಂಡಲ್‌ವುಡ್‌ನ ಖ್ಯಾತ ನಟ ಡಾಲಿ ಧನಂಜಯ್ ಹಾಗೂ ಧನ್ಯತಾ ದಂಪತಿಗೆ ಗಂಡು ಮಗು ಜನಿಸಿರುವ ವಿಚಾರ ಈಗಾಗಲೇ ಅಭಿಮಾನಿಗಳಿಗೆ ಸಂತಸ ತಂದಿತ್ತು.

ಇದೀಗ ಗಣೇಶ ಚತುರ್ಥಿಯಂದೇ ತಮ್ಮ ಮಗನ ಹೆಸರನ್ನು ಡಾಲಿ ದಂಪತಿ ರಿವೀಲ್ ಮಾಡಿದ್ದಾರೆ.

ಮಗನಿಗೆ ‘ಎರೆಯ’ ಎಂದು ನಾಮಕರಣ ಮಾಡಲಾಗಿದೆ.

ಕರ್ನಾಟಕದ ನಕ್ಷೆಯ ಮಧ್ಯೆ ಮಗನ ಹೆಸರು ಇರುವ ವಿಶೇಷ ಡಾಲರ್ ಮಾಡಿಸಿ, ಡಾಲಿ ಧನಂಜಯ್ ಹಾಗೂ ಧನ್ಯತಾ ದಂಪತಿ ಮಗನ ಹೆಸರನ್ನು ಪರಿಚಯಿಸಿದ್ದಾರೆ.


‘ಎರೆಯ’ ಎಂದರೆ ಒಡೆಯ, ಅಧಿಪತಿ ಎಂಬ ಅರ್ಥವಿದೆ. ಇತಿಹಾಸದಲ್ಲಿಯೂ ಇಮ್ಮಡಿ ಪುಲಕೇಶಿಯ ಬಾಲ್ಯದ ಹೆಸರು ಎರೆಯ ಆಗಿತ್ತು ಎಂದು ಡಾಲಿ ದಂಪತಿ ತಿಳಿಸಿದ್ದಾರೆ.

‘ರಾಜರ, ಪಾರಂಪರಿಕ ಮತ್ತು ಶಕ್ತಿಯುತ ಅರ್ಥವನ್ನು ಹೊತ್ತಿರುವ ನಮ್ಮ ಪುಟ್ಟ ಬದುಕಿನ ಅಧಿಪತಿ, ನಮ್ಮ ಹೃದಯದ ರಾಜ ನಮ್ಮ ಎರೆಯ’ ಎಂದು ದಂಪತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಕಳೆದ ವರ್ಷ ಮೈಸೂರಿನಲ್ಲಿ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಡಾಲಿ ಧನಂಜಯ್ ಹಾಗೂ ಧನ್ಯತಾ, ಸ್ಯಾಂಡಲ್‌ವುಡ್‌ನ ಮುದ್ದಾದ ಜೋಡಿಗಳಲ್ಲಿ ಒಬ್ಬರಾಗಿದ್ದಾರೆ.

ಇತ್ತೀಚೆಗಷ್ಟೇ ‘ನಮ್ಮ ಪ್ರಪಂಚ ವಿಸ್ತರಿಸುತ್ತಿದೆ’ ಎಂದು ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಂಡಿದ್ದ ಈ ಜೋಡಿ, ಇದೀಗ ತಮ್ಮ ಮಗನಿಗೆ ‘ಎರೆಯ’ ಎಂದು ನಾಮಕರಣ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.