ಚಿಕ್ಕಬಳ್ಳಾಪುರ: ದೊಡ್ಡಬಳ್ಳಾಪುರದ ಲಾಡ್ಜ್‌ನಲ್ಲಿ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ವ್ಯಕ್ತಿ ಇದೀಗ ಮೃತನಾಗಿ ಪತ್ತೆಯಾಗಿರುವ ಘಟನೆ ಗೌರಿಬಿದನೂರು ತಾಲೂಕಿನ ಮದುಗೆರೆ ಗ್ರಾಮದಲ್ಲಿ ನಡೆದಿದೆ.

ಮೃತನನ್ನು ಆನಂದ್ ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 15ರಂದು ದೊಡ್ಡಬಳ್ಳಾಪುರದ ಲಾಡ್ಜ್‌ನಲ್ಲಿ 23 ವರ್ಷದ ಪತ್ನಿ ವಿದ್ಯಾಳನ್ನು ಐಡಿ ಕಾರ್ಡ್‌ನ ಟ್ಯಾಗ್ ಬಳಸಿ ಕತ್ತು ಬಿಗಿದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು. ಬಳಿಕ ಆನಂದ್ ಸ್ಥಳದಿಂದ ಪರಾರಿಯಾಗಿದ್ದ.

ಸೆಪ್ಟೆಂಬರ್ 16ರಂದು ಲಾಡ್ಜ್‌ನಲ್ಲಿ ವಿದ್ಯಾಳ ಮೃತದೇಹ ಪತ್ತೆಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಪೊಲೀಸರು ಆನಂದ್‌ಗಾಗಿ ಶೋಧ ನಡೆಸುತ್ತಿದ್ದರು.


ಈ ನಡುವೆ ಗೌರಿಬಿದನೂರು ತಾಲೂಕಿನ ಆನಂದ್‌ನ ಸ್ವಗ್ರಾಮ ಮದುಗೆರೆ ಗ್ರಾಮದ ಕೆರೆಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಕೆರೆಯ ಬಳಿ ಆತನ ಬೈಕ್ ಪತ್ತೆಯಾಗಿದ್ದು, ಸಮೀಪದಲ್ಲಿದ್ದ ಮರದಲ್ಲಿ ಆತನ ಮೃತದೇಹ ಕಂಡುಬಂದಿದೆ.

ಸ್ಥಳದಲ್ಲಿ ಮದ್ಯದ ಬಾಟಲಿ ಹಾಗೂ ಸಿಗರೇಟ್ ಪ್ಯಾಕೆಟ್ ಪತ್ತೆಯಾಗಿವೆ. ಅಲ್ಲದೆ, ಆನಂದ್‌ನ ಜೇಬಿನಲ್ಲಿ ಆತನ ಹಾಗೂ ವಿದ್ಯಾಳ ಮೊಬೈಲ್ ಫೋನ್‌ಗಳು ಸಿಕ್ಕಿವೆ ಎಂದು ತಿಳಿದುಬಂದಿದೆ.


ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.