ಫಾರ್ಮ್ 7 ಮೂಲಕ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಬಿಜೆಪಿ ನಾಯಕರ ವಿರುದ್ಧ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಫಾರ್ಮ್ 7 ಮೂಲಕ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.


ವಿಧಾನಸೌಧದಲ್ಲಿ ಎನ್‌ಡಿಎ ನಾಯಕರು ರಾಜ್ಯಪಾಲರಿಗೆ ದೂರು ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಗೆಲ್ಲಬೇಕು. ಆದರೆ ಮತದಾರರ ಪಟ್ಟಿಯಲ್ಲಿ ಮತಗಳನ್ನು ಶಫಲ್ ಮಾಡುವುದು, ಬೇರೆ ಬೂತ್‌ಗಳಿಗೆ ವರ್ಗಾಯಿಸುವುದು ಹಾಗೂ ದಲಿತರು, ಅಲ್ಪಸಂಖ್ಯಾತರು ಮತ್ತು ಬಡವರ ಮತಗಳನ್ನು ತೆಗೆದುಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.


ಬಿಜೆಪಿ ಕಾರ್ಯಕರ್ತರ ಮತಗಳನ್ನೂ ಡಿಲೀಟ್ ಮಾಡಲಾಗಿದೆ ಎಂದು ಹೇಳಿದ ಡಿ.ಕೆ. ಶಿವಕುಮಾರ್, ಈ ಬಗ್ಗೆ ಕೆಲವೆಡೆ ದೂರುಗಳು ಹಾಗೂ ಒಪ್ಪಿಕೊಂಡಿರುವ ಹೇಳಿಕೆಗಳಿವೆ ಎಂದು ತಿಳಿಸಿದರು. ಬಬಲೇಶ್ವರ, ಶೃಂಗೇರಿ, ಬಳ್ಳಾರಿ ಹಾಗೂ ಜಯನಗರ ಸೇರಿದಂತೆ ಹಲವು ಕಡೆ ಇಂತಹ ಪ್ರಕರಣಗಳು ನಡೆದಿವೆ ಎಂದು ಆರೋಪಿಸಿದರು.


ಮತದಾರರಲ್ಲಿ ಜಾಗೃತಿ ಮೂಡಿಸುವುದು ತಮ್ಮ ಜವಾಬ್ದಾರಿ ಎಂದಿರುವ ಡಿ.ಕೆ. ಶಿವಕುಮಾರ್, ಮತದಾರರ ಹಕ್ಕುಗಳನ್ನು ರಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.