ಹಾಸನ ದಲ್ಲಿ ಸೆ.23ರಂದು ನಡೆದ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಅನುಮತಿ ಇಲ್ಲದೆ DJ ಬಳಸಿ ಶಬ್ದ ಮಾಲಿನ್ಯ ಉಂಟುಮಾಡಿದ ಆರೋಪದಡಿ ಆಯೋಜಕರು ಸೇರಿ 15 ಜನರ ವಿರುದ್ಧ 4 FIR ದಾಖಲಾಗಿದೆ.
ಹಾಸನ: ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಅನುಮತಿ ಇಲ್ಲದೆ ಡಿಜೆ ಬಳಸಿದ ಆರೋಪದ ಹಿನ್ನೆಲೆಯಲ್ಲಿ 15 ಜನರ ವಿರುದ್ಧ ನಾಲ್ಕು ಪ್ರತ್ಯೇಕ ಎಫ್ಐಆರ್ಗಳು ದಾಖಲಾಗಿವೆ.
ಸೆಪ್ಟೆಂಬರ್ 23ರಂದು ಹಾಸನ ನಗರದಲ್ಲಿ ವಿಎಚ್ಪಿ ಮತ್ತು ಬಜರಂಗದಳದ ವತಿಯಿಂದ ಆಯೋಜಿಸಲಾಗಿದ್ದ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವದ ಮೆರವಣಿಗೆ ವೇಳೆ ಅನುಮತಿ ಇಲ್ಲದೆ ಡಿಜೆ ಬಳಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಡಿಜೆ ಬಳಕೆಯಿಂದ ತೀವ್ರ ಶಬ್ದ ಮಾಲಿನ್ಯ ಉಂಟಾಗಿ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹಾಸನ ನಗರ ಠಾಣೆಯ ಸಬ್ಇನ್ಸ್ಪೆಕ್ಟರ್ಗಳಾದ ಪ್ರಿಯಾಂಕಾ ಮತ್ತು ಸರೋಜಾಬಾಯಿ, ಪೊಲೀಸ್ ಕಾನ್ಸ್ಟೇಬಲ್ಗಳಾದ ಹರೀಶ್ ಮತ್ತು ಲತೇಶ್ ನೀಡಿದ ದೂರುಗಳ ಆಧಾರದ ಮೇಲೆ ನಾಲ್ಕು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದಯಾನಂದ, ಅಭಿಷೇಕ್, ವಿಕ್ಕಿ, ಲೋಕಿ, ದಿನೇಶ್ಸಿಂಗ್, ಅನುಪ, ವಿಕಾಸ್, ಶರತ್, ಮಂಜು, ಚಂದನ್, ಮಹಿಪಾಲ್, ನವೀನ್, ಚರಣ್, ಮಧು ಹಾಗೂ ಪವನ್ ಸೇರಿದಂತೆ ಒಟ್ಟು 15 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಇವರ ಪೈಕಿ ದಯಾನಂದ, ಅಭಿಷೇಕ್, ವಿಕ್ಕಿ, ಲೋಕಿ, ದಿನೇಶ್ಸಿಂಗ್, ಅನುಪ, ವಿಕಾಸ್, ಶರತ್, ಮಂಜು, ಚಂದನ್ ಹಾಗೂ ಮಹಿಪಾಲ್ ವಿರುದ್ಧ ನಾಲ್ಕೂ ಪ್ರಕರಣಗಳಲ್ಲಿ ಆರೋಪ ದಾಖಲಿಸಲಾಗಿದೆ. ಪ್ರಕರಣದ ಕುರಿತು ಹಾಸನ ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.