ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಸಲ್ಲಿಸಿದ್ದ ಬ್ಯಾರಕ್ ಬದಲಾವಣೆ ಅರ್ಜಿಯನ್ನು ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯ ವಜಾಗೊಳಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡಗೆ ನ್ಯಾಯಾಲಯದಲ್ಲಿ ಮತ್ತೆ ಹಿನ್ನಡೆಯಾಗಿದೆ. ತಾವು ಇರುವ ಬ್ಯಾರಕ್ ಬದಲಾಯಿಸುವಂತೆ ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯ ವಜಾಗೊಳಿಸಿದೆ.
ಬ್ಯಾರಕ್ನಲ್ಲಿರುವ ಇತರ ಆರೋಪಿಗಳಿಂದ ತೊಂದರೆಯಾಗುತ್ತಿದೆ. ತಮ್ಮ ಉಡುಪುಗಳನ್ನು ಇತರರು ಬಳಸುತ್ತಿದ್ದಾರೆ ಹಾಗೂ ಪದೇಪದೇ ಸಮಸ್ಯೆ ಎದುರಾಗುತ್ತಿದೆ ಎಂದು ಪವಿತ್ರಾ ಗೌಡ ಅರ್ಜಿಯಲ್ಲಿ ತಿಳಿಸಿದ್ದರು ಎನ್ನಲಾಗಿದೆ.
ಬ್ಯಾರಕ್ನ ವ್ಯವಸ್ಥೆಯನ್ನು ನ್ಯಾಯಾಧೀಶರ ಸಮಿತಿ ಪರಿಶೀಲಿಸಬೇಕು, ಬ್ಯಾರಕ್ ಬದಲಾವಣೆಗೆ ಅನುಮತಿ ನೀಡಬೇಕು ಮತ್ತು ಪ್ರತ್ಯೇಕ ಆರೋಗ್ಯ ತಪಾಸಣೆಗೆ ಅವಕಾಶ ಕಲ್ಪಿಸಬೇಕು ಎಂಬ ಬೇಡಿಕೆಗಳನ್ನೂ ಅವರು ಮುಂದಿಟ್ಟಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಅಕ್ಟೋಬರ್ 23ರಂದು ಅದನ್ನು ವಜಾಗೊಳಿಸಿದೆ ಎಂದು ವರದಿಯಾಗಿದೆ. ಪ್ರಕರಣದ ಇತರ ಆರೋಪಿಗಳಾದ ಅನುಕುಮಾರ್ ಮತ್ತು ಜಗದೀಶ್ ಸಲ್ಲಿಸಿದ್ದ ಅರ್ಜಿಗಳನ್ನೂ ನ್ಯಾಯಾಲಯ ತಿರಸ್ಕರಿಸಿದೆ ಎಂದು ವರದಿ ತಿಳಿಸಿದೆ.
ಈ ಮೂಲಕ ಬ್ಯಾರಕ್ ಬದಲಾವಣೆಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಗಳ ಕುರಿತು ನ್ಯಾಯಾಲಯ ತನ್ನ ಆದೇಶ ಪ್ರಕಟಿಸಿದೆ.