Dharwad  ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪೊಲೀಸರ ವಶದಲ್ಲಿದ್ದ ರೌಡಿಶೀಟರ್ ಅರಬಾಝ್ ದೊಡಮನಿ ಪರಾರಿಯಾಗಿದ್ದಾನೆ.

Dharwad : ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಪೊಲೀಸರ ವಶದಲ್ಲಿದ್ದ ರೌಡಿಶೀಟರ್‌ ಒಬ್ಬರು ಪರಾರಿಯಾಗಿರುವ ಘಟನೆ ನಡೆದಿದೆ. ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ಅರಬಾಝ್ ದೊಡಮನಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಧಾರವಾಡಕ್ಕೆ ಕರೆತರಲಾಗಿತ್ತು.

ನ್ಯಾಯಾಲಯಕ್ಕೆ ಕರೆತಂದಿದ್ದ ವೇಳೆ ಟೀ ಕುಡಿಯಬೇಕು ಎಂದು ಅರಬಾಝ್ ಪೊಲೀಸರ ಬಳಿ ಹೇಳಿದ್ದಾನೆ ಎನ್ನಲಾಗಿದೆ. ಬಳಿಕ ಆತನನ್ನು ಟೀ ಅಂಗಡಿಯೊಂದಕ್ಕೆ ಕರೆದೊಯ್ಯಲಾಗಿತ್ತು.


ಟೀ ಕುಡಿಯಲು ಆಗುತ್ತಿಲ್ಲ ಎಂದು ಹೇಳಿದ ಅರಬಾಝ್, ಕೈಗೆ ಹಾಕಿದ್ದ ಬೇಡಿ ತೆಗೆಯುವಂತೆ ಪೊಲೀಸರ ಬಳಿ ಕೇಳಿಕೊಂಡಿದ್ದಾನೆ. ಬೇಡಿ ತೆಗೆಯುತ್ತಿದ್ದಂತೆ, ಮೊದಲೇ ಸಿದ್ಧಪಡಿಸಿಕೊಂಡಿದ್ದ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅರಬಾಝ್ ವಿರುದ್ಧ ಹೊಡೆದಾಟ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು.

ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪರಾರಿಯಾಗಿರುವ ಅರಬಾಝ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.