ಧಾರವಾಡದ ಸವದತ್ತಿ ರಸ್ತೆಯಲ್ಲಿರುವ ಲಕ್ಷ್ಮೀ ಸ್ಟೀಲ್ ಟ್ರೇಡರ್ಸ್ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

ನಗರದ ಸವದತ್ತಿ ರಸ್ತೆಯಲ್ಲಿರುವ ಸ್ಟೀಲ್ ಅಂಗಡಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟುಹೋಗಿವೆ.

ಸವದತ್ತಿ ರಸ್ತೆಯ ಲಕ್ಷ್ಮೀ ಸ್ಟೀಲ್ ಟ್ರೇಡರ್ಸ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಅಂಗಡಿ ಮಾಲೀಕರು ಭಾನುವಾರ ರಾತ್ರಿ ವ್ಯಾಪಾರ ಮುಗಿಸಿ, ಅಂದಿನ ಹಣವನ್ನು ಅಂಗಡಿಯಲ್ಲೇ ಇಟ್ಟು ಬೀಗ ಹಾಕಿಕೊಂಡು ತೆರಳಿದ್ದರು ಎನ್ನಲಾಗಿದೆ.

ಬಳಿಕ ಅಂಗಡಿಯೊಳಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು, ಕ್ಷಣಾರ್ಧದಲ್ಲೇ ಬೆಂಕಿ ಅಂಗಡಿಯಾದ್ಯಂತ ವ್ಯಾಪಿಸಿದೆ. ಅಂಗಡಿಯಲ್ಲಿದ್ದ ವಸ್ತುಗಳ ಜೊತೆಗೆ ವ್ಯಾಪಾರದ ಹಣವೂ ಬೆಂಕಿಗಾಹುತಿಯಾಗಿದೆ ಎಂದು ವರದಿಯಾಗಿದೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನೆ ಧಾರವಾಡ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ನಷ್ಟದ ಸಂಪೂರ್ಣ ವಿವರ ಇನ್ನಷ್ಟೇ ತಿಳಿದುಬರಬೇಕಿದೆ.