Dharwad ಬೈಪಾಸ್ ರಸ್ತೆಯ ಹಳಿಯಾಳ ಸೇತುವೆ ಬಳಿ ಚಲಿಸುತ್ತಿದ್ದ ರೆನಾಲ್ಟ್ ಡಸ್ಟರ್ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.
Dharwad : ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕಾರು ಸಂಪೂರ್ಣ ಸುಟ್ಟುಹೋದ ಘಟನೆ ಧಾರವಾಡ ಹೊರವಲಯದ ಬೈಪಾಸ್ ರಸ್ತೆಯ ಹಳಿಯಾಳ ಸೇತುವೆ ಬಳಿ ನಡೆದಿದೆ.
ಅವೀದ್ ಶೇಖ್ ಅವರಿಗೆ ಸೇರಿದ ರೆನಾಲ್ಟ್ ಡಸ್ಟರ್ ಕಾರು ಹುಬ್ಬಳ್ಳಿಯಿಂದ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳಕ್ಕೆ ತೆರಳುತ್ತಿತ್ತು. ಈ ವೇಳೆ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ತಕ್ಷಣ ಎಚ್ಚೆತ್ತುಕೊಂಡ ಪ್ರಯಾಣಿಕರು ಕಾರಿನಿಂದ ಕೆಳಗಿಳಿದಿದ್ದಾರೆ.
ಅವರು ಹೊರಬಂದ ಕೆಲವೇ ಕ್ಷಣಗಳಲ್ಲಿ ಬೆಂಕಿ ಕಾರಿನಾದ್ಯಂತ ವ್ಯಾಪಿಸಿದ್ದು, ಕಾರು ಸಂಪೂರ್ಣ ಸುಟ್ಟುಹೋಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.