ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆಯಲ್ಲಿ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದ ವೇಳೆ ಸಮಸ್ಯೆ ಹೇಳಲು ಬಂದ ಸಾರ್ವಜನಿಕನಿಗೆ ಶಾಸಕ ವೆಂಕಟೇಶ್ ಏಕವಚನದಲ್ಲಿ ಮಾತನಾಡಿ ಧಮ್ಕಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಪಾವಗಡ: ಜನರ ಸಮಸ್ಯೆಗಳನ್ನು ಮನೆಬಾಗಿಲಿಗೆ ತೆರಳಿ ಆಲಿಸುವ ಉದ್ದೇಶದೊಂದಿಗೆ ಸರ್ಕಾರ ‘ಪ್ರಜಾ ಸೇವಾ’ ಆಂದೋಲನ ನಡೆಸುತ್ತಿರುವ ನಡುವೆಯೇ, ಪಾವಗಡದಲ್ಲಿ ನಡೆದ ಕಾರ್ಯಕ್ರಮವೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ.
ವೈ.ಎನ್. ಹೊಸಕೋಟೆಯಲ್ಲಿ ನಡೆದ ಪ್ರಜಾ ಸೇವಾ ಆಂದೋಲನ ಉದ್ಘಾಟನಾ ಕಾರ್ಯಕ್ರಮದಲ್ಲಿ, ತಮ್ಮ ಸಮಸ್ಯೆ ಹೇಳಿಕೊಳ್ಳಲು ಬಂದ ಸಾರ್ವಜನಿಕನೊಂದಿಗೆ ಪಾವಗಡ ಶಾಸಕ ವೆಂಕಟೇಶ್ ಅವರು ಕಠಿಣವಾಗಿ ಮಾತನಾಡಿರುವ ಆರೋಪ ಕೇಳಿಬಂದಿದೆ.
ಸಮಸ್ಯೆ ಹೇಳಲು ಬಂದ ವ್ಯಕ್ತಿಗೆ ಅವಾಜ್?
ಕಾರ್ಯಕ್ರಮದ ವೇಳೆ ಸಾರ್ವಜನಿಕರೊಬ್ಬರು ತಮ್ಮ ಸಮಸ್ಯೆಯನ್ನು ವಿವರಿಸಲು ಮುಂದಾದಾಗ, ಅವರಿಗೆ “ಹೇ, ಅರ್ಜಿ ಕೊಟ್ಟೊಗ್ ಬೇಕ್ ಅಷ್ಟೇ, ಜಾಸ್ತಿ ಮಾತಾಡಬೇಡ, ಆಚೆ ಹೋಗು” ಎಂದು ಶಾಸಕ ವೆಂಕಟೇಶ್ ಮಾತನಾಡಿರುವುದು ವಿಡಿಯೋದಲ್ಲಿ ಕೇಳಿಬಂದಿದೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದರ ಜೊತೆಗೆ, “ತಿರ್ಗಾ ಮಾತಾಡಿದ್ರೆ ಅಷ್ಟೇ” ಎಂಬ ಮಾತನ್ನೂ ಶಾಸಕ ಬಳಸಿದ್ದಾರೆ ಎಂದು ವಿಡಿಯೋ ಆಧರಿಸಿ ಆರೋಪಿಸಲಾಗಿದೆ.
ಪ್ರಜಾ ಸೇವೆ ಎಂದರೆ ಜನರ ಸಮಸ್ಯೆ ಆಲಿಸುವುದಲ್ಲವೇ?
ಮುಖ್ಯಮಂತ್ರಿಗಳು ಜನರ ಮನೆಬಾಗಿಲಿಗೆ ಸರ್ಕಾರದ ಸೇವೆ ತಲುಪಿಸುವ ಉದ್ದೇಶದಿಂದ ಪ್ರಜಾ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿರುವ ಸಂದರ್ಭದಲ್ಲಿ, ಸಮಸ್ಯೆ ಹೇಳಿಕೊಳ್ಳಲು ಬಂದ ಸಾರ್ವಜನಿಕನೊಂದಿಗೆ ಈ ರೀತಿಯ ವರ್ತನೆ ನಡೆದಿರುವ ಆರೋಪಕ್ಕೆ ವಿರೋಧ ವ್ಯಕ್ತವಾಗುತ್ತಿದೆ.
ಜನರ ಸಮಸ್ಯೆಗಳನ್ನು ಕೇಳಿ ಪರಿಹರಿಸುವುದೇ ಪ್ರಜಾ ಸೇವೆಯ ಉದ್ದೇಶವಾಗಿದ್ದರೆ, ತಮ್ಮ ಅಹವಾಲು ಹೇಳಲು ಬಂದ ಸಾರ್ವಜನಿಕರೊಂದಿಗೆ ಏಕವಚನದಲ್ಲಿ ಮಾತನಾಡುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತುತ್ತಿದ್ದಾರೆ.
ಶಾಸಕ ವೆಂಕಟೇಶ್ ವಿರುದ್ಧ ಆಕ್ರೋಶ
ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಶಾಸಕ ವೆಂಕಟೇಶ್ ಅವರ ನಡೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
“ಸಮಸ್ಯೆ ಹೇಳಲು ಬಂದರೆ ಧಮ್ಕಿ ಹಾಕುತ್ತೀರಾ? ಜನಪ್ರತಿನಿಧಿಗಳು ಜನರ ಮಾತು ಕೇಳಬೇಕಲ್ಲವೇ?” ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.
ಪಾವಗಡದಲ್ಲಿ ನಡೆದ ಈ ಘಟನೆ ಇದೀಗ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದ್ದು, ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಇನ್ನಷ್ಟು ಪ್ರತಿಕ್ರಿಯೆಗಳು ಹೊರಬರುವ ಸಾಧ್ಯತೆ ಇದೆ.