ದಾವಣಗೆರೆ: ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಚಾಕುವಿನಿಂದ ದಾಳಿ ನಡೆಸಿ ಹತ್ಯೆ ಮಾಡಿದ ಆರೋಪ ಕೇಳಿಬಂದಿರುವ ಘಟನೆ ನಗರದ ಶೇಖರಪ್ಪ ನಗರದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು 45 ವರ್ಷದ ನಾಗರತ್ನ ಎಂದು ಗುರುತಿಸಲಾಗಿದೆ. 36 ವರ್ಷದ ನಾಗರಾಜ್ ಎಂಬಾತನ ಮೇಲೆ ಕೊಲೆ ಆರೋಪ ಕೇಳಿಬಂದಿದೆ. ನಾಗರಾಜ್ ಹಲವು ವರ್ಷಗಳಿಂದ ನಾಗರತ್ನ ಅವರೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ.


ನಾಗರತ್ನ ಅವರನ್ನು ಹತ್ಯೆ ಮಾಡಿದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ ಎನ್ನಲಾಗಿದೆ. ಈ ವೇಳೆ ಮಹಿಳೆಯ ಕಿರುಚಾಟ ಕೇಳಿ ಬಂದ ಸ್ಥಳೀಯರು ಆರೋಪಿಯನ್ನು ಹಿಡಿದು ತೆಂಗಿನ ಮರಕ್ಕೆ ಕಟ್ಟಿ ಹಾಕಿ, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಇಬ್ಬರ ನಡುವೆ ಕಳೆದ ಕೆಲ ದಿನಗಳಿಂದ ಪದೇಪದೇ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.


ಮೂರು ಮಕ್ಕಳ ತಾಯಿ ನಾಗರತ್ನ

ನಾಗರತ್ನ ತನ್ನ ಪತಿಯಿಂದ ದೂರವಾಗಿದ್ದು, ತನ್ನ ಮೂವರು ಮಕ್ಕಳನ್ನು ಬೇರೆಡೆ ಮನೆ ಮಾಡಿ ಬಿಟ್ಟಿದ್ದಳು. ಬಳಿಕ ಶೇಖರಪ್ಪ ನಗರದಲ್ಲಿ ಒಂಟಿಯಾಗಿ ವಾಸವಾಗಿದ್ದಳು.

ಕಲ್ಯಾಣ ಮಂಟಪವೊಂದರಲ್ಲಿ ಕೆಲಸ ಮಾಡುತ್ತಿದ್ದ ನಾಗರತ್ನಗೆ ನಾಗರಾಜ್ ಪರಿಚಯವಾಗಿದ್ದ. ಬಳಿಕ ಇಬ್ಬರ ನಡುವೆ ಸಂಬಂಧ ಬೆಳೆದಿತ್ತು ಎಂದು ತಿಳಿದುಬಂದಿದೆ.

ಇತ್ತೀಚಿನ ದಿನಗಳಲ್ಲಿ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು, ಇದರಿಂದ ಸುತ್ತಮುತ್ತಲಿನ ನಿವಾಸಿಗಳು ನಾಗರತ್ನ ಅವರಿಗೆ ಮನೆ ಖಾಲಿ ಮಾಡಿಕೊಂಡು ಹೋಗುವಂತೆ ಸೂಚಿಸಿದ್ದರು. ಆದರೂ ಅವರು ಅಲ್ಲಿಯೇ ವಾಸವಾಗಿದ್ದರು ಎಂದು ತಿಳಿದುಬಂದಿದೆ.


ಬೆಳಗ್ಗೆ ನಡೆದ ಘಟನೆ

ಸೆಪ್ಟೆಂಬರ್ 19ರಂದು ಬೆಳಗ್ಗೆ ಸುಮಾರು 10.30ರ ವೇಳೆಗೆ ನಾಗರಾಜ್, ನಾಗರತ್ನ ಅವರ ಮನೆಗೆ ಬಂದಿದ್ದಾನೆ ಎನ್ನಲಾಗಿದೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ನಾಗರಾಜ್ ಚಾಕುವಿನಿಂದ ನಾಗರತ್ನ ಮೇಲೆ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಗಂಭೀರವಾಗಿ ಗಾಯಗೊಂಡ ನಾಗರತ್ನ ಮೃತಪಟ್ಟಿದ್ದಾರೆ.


ಮಾಹಿತಿ ತಿಳಿಯುತ್ತಿದ್ದಂತೆ RMC ಯಾರ್ಡ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೊಲೆಗೆ ನಿಖರ ಕಾರಣ ಸೇರಿದಂತೆ ಘಟನೆಗೆ ಸಂಬಂಧಿಸಿದ ಇತರ ಅಂಶಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.