Davanagere : ಭದ್ರಾ ಜಲಾಶಯದಿಂದ ಬಲದಂಡೆ ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿ ಬಿಜೆಪಿ ಹಾಗೂ ರೈತ ಒಕ್ಕೂಟದಿಂದ ದಾವಣಗೆರೆಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ.
ದಾವಣಗೆರೆ: ಭದ್ರಾ ಜಲಾಶಯದಿಂದ ಬಲದಂಡೆ ನಾಲೆಗೆ ನೀರು ಹರಿಸುವಂತೆ ಆಗ್ರಹಿಸಿ ಬಿಜೆಪಿ ಹಾಗೂ ರೈತ ಒಕ್ಕೂಟದಿಂದ ದಾವಣಗೆರೆಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ.
ದಾವಣಗೆರೆ ಹೊರವಲಯದ ಬಾಡ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಅಪ್ಪರ್ ಭದ್ರ ಯೋಜನೆಗೆ ಮೂರು ಟಿಎಂಸಿ ನೀರು ಹರಿಸಿ, ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸರ್ಕಾರ ಅನ್ಯಾಯ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಮಳೆ ಕೊರತೆಯಿಂದ ತೋಟಗಳು, ಬೆಳೆಗಳು ಹಾಗೂ ಭತ್ತ ಒಣಗುತ್ತಿವೆ. ಕೆರೆಗಳು ಬತ್ತಿಹೋಗಿದ್ದು, ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಹೀಗಾಗಿ ಭದ್ರಾ ಬಲದಂಡೆ ನಾಲೆಗೆ ಕೂಡಲೇ ನೀರು ಹರಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಪ್ರತಿಭಟನೆ ಕುರಿತು ಮಾತನಾಡಿರುವ ಎಂ.ಪಿ. ರೇಣುಕಾಚಾರ್ಯ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೂ ಮನವಿ ಮಾಡಿದ್ದೆವು. ಡಿ.ಕೆ. ಶಿವಕುಮಾರ್ ನೀರಾವರಿ ಸಚಿವರಾಗಿದ್ದಾಗಲೂ ಮನವಿ ಸಲ್ಲಿಸಲಾಗಿತ್ತು. ಈಗ ನಾವು ಪ್ರಯತ್ನ ಮಾಡದಿದ್ದರೆ ಭದ್ರೆ ನಮ್ಮ ಕೈತಪ್ಪಿ ಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಭದ್ರಾ ಜಲಾಶಯದ ನೀರಿನ ವಿಚಾರದಲ್ಲಿ ಸರ್ಕಾರ ಕೂಡಲೇ ಕ್ರಮ ಕೈಗೊಂಡು ರೈತರ ಬೆಳೆಗಳಿಗೆ ನೀರು ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.