Davanagere ತಾಲೂಕಿನ ಮಾಯಕೊಂಡ ಬಳಿ ವಂದೇ ಭಾರತ್ ಎಕ್ಸ್ಪ್ರೆಸ್ ಸೇರಿದಂತೆ ನಾಲ್ಕು ರೈಲುಗಳ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.
Davanagere : ಚಿತ್ರದುರ್ಗ ಮಾರ್ಗವಾಗಿ ನಡೆಯುತ್ತಿರುವ ಹೊಸ ರೈಲ್ವೆ ಮಾರ್ಗದ ಕಾಮಗಾರಿಯಿಂದಾಗಿ ದಾವಣಗೆರೆ ಬಳಿ ರೈಲು ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.
ಬೆಂಗಳೂರಿನಿಂದ ಬೆಳಗಾವಿಗೆ ತೆರಳುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ಸೇರಿದಂತೆ ನಾಲ್ಕು ರೈಲುಗಳು ಮಾರ್ಗಮಧ್ಯೆ ಗಂಟೆಗಟ್ಟಲೆ ನಿಂತಿದ್ದವು. ಸಂಜೆ 5:30ರ ಸುಮಾರಿಗೆ ಮಾಯಕೊಂಡ ರೈಲ್ವೆ ನಿಲ್ದಾಣಕ್ಕೆ ಬಂದ ವಂದೇ ಭಾರತ್ ರೈಲು ಸುಮಾರು ನಾಲ್ಕು ಗಂಟೆಗಳ ಕಾಲ ಅಲ್ಲಿಯೇ ನಿಂತಿತ್ತು.
ಇನ್ನು ಕೊಡಗನೂರು, ಸಾಸಲು ಹಾಗೂ ಶಿವನಿ ನಿಲ್ದಾಣಗಳಲ್ಲೂ ತಲಾ ಒಂದು ರೈಲು ನಿಲುಗಡೆಯಾಗಿತ್ತು. ರೈಲು ಸಂಚಾರ ಪುನರಾರಂಭದ ಬಗ್ಗೆ ಸ್ಪಷ್ಟ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ಪ್ರಯಾಣಿಕರು ರೈಲ್ವೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮಾಯಕೊಂಡದಲ್ಲಿ ನಿಂತಿದ್ದ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಆದರೆ ಉಳಿದ ಮೂರು ರೈಲುಗಳ ಪ್ರಯಾಣಿಕರಿಗೆ ಗ್ರಾಮೀಣ ಪ್ರದೇಶದ ಸಣ್ಣ ನಿಲ್ದಾಣಗಳಲ್ಲಿ ಕುಡಿಯುವ ನೀರು ಹಾಗೂ ಆಹಾರಕ್ಕಾಗಿ ಸಮಸ್ಯೆ ಎದುರಾಯಿತು.
ಬಸ್ ಮೂಲಕ ತೆರಳಲು ಕೆಲವರು ಮುಂದಾದರೂ ಸೂಕ್ತ ಬಸ್ ಸಂಪರ್ಕ ಇಲ್ಲದ ಕಾರಣ ಮತ್ತೆ ರೈಲಿನಲ್ಲೇ ಕಾಯುವಂತಾಯಿತು. ತಡರಾತ್ರಿ ರೈಲು ಸಂಚಾರ ಪುನರಾರಂಭಗೊಂಡು ಪ್ರಯಾಣಿಕರು ತಮ್ಮ ಗಮ್ಯಸ್ಥಾನದತ್ತ ತೆರಳಿದರು.