Mandya ದ  ಅಶೋಕ ನಗರದಲ್ಲಿ ಮುಂಜಾನೆ ಟೀ ಸ್ಟಾಲ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಬೆಂಕಿ ಅವಘಡ ಸಂಭವಿಸಿದೆ. 

ಟೀ ಸ್ಟಾಲ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಭಾರೀ ಬೆಂಕಿ ಅವಘಡ ಸಂಭವಿಸಿರುವ ಘಟನೆ Mandya ದ ಅಶೋಕ ನಗರದಲ್ಲಿ ಮುಂಜಾನೆ ನಡೆದಿದೆ.

ಇಂದು ಬೆಳಗಿನ ಜಾವ ಸುಮಾರು 4.45ರ ವೇಳೆಗೆ ಈ ಘಟನೆ ಸಂಭವಿಸಿದೆ. ಕಳೆದ ರಾತ್ರಿ ಅಂಗಡಿ ಬಂದ್ ಮಾಡುವ ವೇಳೆ ಸಿಲಿಂಡರ್ ವಾಲ್ವ್ ಆಫ್ ಮಾಡಲು ಮರೆತಿರುವ ಸಾಧ್ಯತೆ ಇದ್ದು, ರಾತ್ರಿಯಿಡೀ ಗ್ಯಾಸ್ ಸೋರಿಕೆಯಾಗಿ ಮುಂಜಾನೆ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ ಎನ್ನಲಾಗಿದೆ.

ಸ್ಫೋಟದ ತೀವ್ರತೆಗೆ ಟೀ ಸ್ಟಾಲ್‌ನಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ. ಅಲ್ಲದೆ, ಪಕ್ಕದಲ್ಲಿದ್ದ ಟೈಲ್ಸ್ ಅಂಗಡಿಗೂ ಬೆಂಕಿ ವ್ಯಾಪಿಸಿದೆ.

ಘಟನೆ ಗಮನಿಸಿದ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.


₹20 ಲಕ್ಷಕ್ಕೂ ಅಧಿಕ ನಷ್ಟ

ಬೆಂಕಿ ಅವಘಡದಲ್ಲಿ ಟೀ ಸ್ಟಾಲ್‌ನಲ್ಲಿದ್ದ 3 ಫ್ರೀಜರ್‌ಗಳು, 1 ಡಬಲ್ ಸ್ಟೋರ್ ಫ್ರೀಜರ್, 15 ಟೇಬಲ್‌ಗಳು, 15 ಚೇರ್‌ಗಳು, ಫ್ಯಾನ್‌ಗಳು, ಅಡುಗೆ ಸಾಮಗ್ರಿಗಳು, ಯುಪಿಎಸ್ ಹಾಗೂ ಕಂಪ್ಯೂಟರ್‌ಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ.

ಈ ಘಟನೆಯಿಂದ ಒಟ್ಟು ₹20 ಲಕ್ಷಕ್ಕೂ ಅಧಿಕ ಮೌಲ್ಯದ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಮುಂಜಾನೆ 4.45ರ ಸುಮಾರಿಗೆ ಘಟನೆ ನಡೆದಿದ್ದರಿಂದ ಟೀ ಸ್ಟಾಲ್‌ನಲ್ಲಿ ಹೆಚ್ಚಿನ ಜನರು ಇರಲಿಲ್ಲ. ಹೀಗಾಗಿ ದೊಡ್ಡ ಮಟ್ಟದ ಪ್ರಾಣಾಪಾಯ ಸಂಭವಿಸದೇ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.