ತಮಿಳುನಾಡಿನ ಕೊಲತ್ತೂರು ಕ್ಷೇತ್ರದ ಟಿವಿಕೆ ಶಾಸಕ ವಿ.ಎಸ್. ಬಾಬು ಅವರ ಅಂತಿಮ ಯಾತ್ರೆಯಲ್ಲಿ ಮುಖ್ಯಮಂತ್ರಿ ವಿಜಯ್ ಪಾಲ್ಗೊಂಡರು..
ನಿಧನರಾದ ತಮ್ಮ ಪಕ್ಷದ ಶಾಸಕ ವಿ.ಎಸ್. ಬಾಬು ಅವರ ಅಂತಿಮ ಯಾತ್ರೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ ಮುಖ್ಯಸ್ಥ ಸಿ. ಜೋಸೆಫ್ ವಿಜಯ್ ಭಾವುಕವಾಗಿ ಭಾಗವಹಿಸಿದರು. ಕೊಲತ್ತೂರು ಕ್ಷೇತ್ರದ ಶಾಸಕ ಬಾಬು ಅವರ ಪಾರ್ಥಿವ ಶರೀರಕ್ಕೆ ಸ್ವತಃ ಹೆಗಲು ಕೊಟ್ಟು ಅಂತಿಮ ಗೌರವ ಸಲ್ಲಿಸಿದರು.
ಚೆನ್ನೈನ ಪೆರಂಬೂರಿನಲ್ಲಿರುವ ಬಾಬು ಅವರ ನಿವಾಸದಿಂದ ಅಂತಿಮ ಯಾತ್ರೆ ಆರಂಭವಾಯಿತು. ಮನೆಯ ಹೊರಗೆ ಪಾರ್ಥಿವ ಶರೀರವನ್ನು ಹೊತ್ತು ತಂದ ವಿಜಯ್, ಅದನ್ನು ಶವವಾಹನದಲ್ಲಿ ಇರಿಸಲು ಸಹಕರಿಸಿದರು. ಬಳಿಕ ತಿರು.ವಿ.ಕಾ ನಗರದ ವಿದ್ಯುತ್ ಚಿತಾಗಾರದವರೆಗೂ ಶವವಾಹನದ ಜೊತೆ ನಡೆದು ಸಾಗಿದರು.
ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೋ, ರಾಜ್ಯ ಸಚಿವರು, ಟಿವಿಕೆ ಶಾಸಕರು, ಪಕ್ಷದ ಪದಾಧಿಕಾರಿಗಳು ಹಾಗೂ ಸಾವಿರಾರು ಕಾರ್ಯಕರ್ತರು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
75 ವರ್ಷದ ವಿ.ಎಸ್. ಬಾಬು ಅವರು ದೀರ್ಘಕಾಲದ ಅನಾರೋಗ್ಯದಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನವೆಂಬರ್ 19ರಂದು ಹೃದಯಾಘಾತದಿಂದ ಅವರು ನಿಧನರಾದರು ಎಂದು ಆಸ್ಪತ್ರೆ ತಿಳಿಸಿದೆ.
ಬಾಬು ಅವರ ನಿಧನಕ್ಕೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಸಂತಾಪ ಸೂಚಿಸಿದ್ದಾರೆ. ತಮ್ಮ ಪಕ್ಷದ ಶಾಸಕನಿಗೆ ವಿಜಯ್ ಸಲ್ಲಿಸಿದ ಅಂತಿಮ ಗೌರವದ ದೃಶ್ಯಗಳು ಇದೀಗ ಗಮನ ಸೆಳೆದಿವೆ.