Chikkamagaluru ತಾಲೂಕಿನ ಮರ್ಲೆ ಗ್ರಾಮದ ಚಿಕ್ಕಕೆರೆಯಲ್ಲಿ ಈಜಲು ತೆರಳಿದ್ದ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

Chikkamagaluru : ದಸರಾ ರಜೆ ಹಿನ್ನೆಲೆಯಲ್ಲಿ ಕೆರೆಯಲ್ಲಿ ಈಜಲು ತೆರಳಿದ್ದ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುಃಖದ ಘಟನೆ ಚಿಕ್ಕಮಗಳೂರು ತಾಲೂಕಿನ ಮರ್ಲೆ ಗ್ರಾಮದ ಚಿಕ್ಕಕೆರೆಯಲ್ಲಿ ನಡೆದಿದೆ.

ತರುಣ್, ಭುವನ್ ಹಾಗೂ ಲಿಖಿತ್ ಮೃತ ಮಕ್ಕಳು ಎಂದು ತಿಳಿದುಬಂದಿದ್ದು, ಮೂವರೂ 6ನೇ ತರಗತಿಯಲ್ಲಿ ಓದುತ್ತಿದ್ದರು. ಒಂದೇ ಗ್ರಾಮದವರಾಗಿದ್ದ ಮಕ್ಕಳು ದಸರಾ ರಜೆಯ ಹಿನ್ನೆಲೆಯಲ್ಲಿ ಕೆರೆಗೆ ತೆರಳಿದ್ದರು ಎನ್ನಲಾಗಿದೆ.


ಕಳೆದ ವರ್ಷ ಕೆರೆಯಲ್ಲಿ ಹೂಳು ತೆಗೆದಿದ್ದರಿಂದ ಆಳ ಹೆಚ್ಚಾಗಿತ್ತು ಎನ್ನಲಾಗಿದ್ದು, ಮಕ್ಕಳಿಗೆ ಇದರ ಅರಿವಿಲ್ಲದೆ ಈಜಲು ತೆರಳಿದ್ದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.


ಘಟನೆ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಕೆರೆ ಬಳಿ ಜಮಾಯಿಸಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಮಾಹಿತಿ ಪಡೆದ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.