Chikkamagaluru ಜಿಲ್ಲೆಯ ಶೃಂಗೇರಿ ತಾಲೂಕಿನ ಚಿಮ್ಮೆ ಗ್ರಾಮದಲ್ಲಿ ಶೌಚಾಲಯಕ್ಕಾಗಿ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದ ಮಹಿಳೆ ಜನಸೇವಾ ಕಾರ್ಯಕ್ರಮದಲ್ಲಿ ಶಾಸಕರ ಎದುರೇ ಕಣ್ಣೀರಿಟ್ಟಿದ್ದಾರೆ.

Chikkamagaluru : ಶೌಚಾಲಯ ನಿರ್ಮಿಸಿಕೊಡುವಂತೆ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದ ಮಹಿಳೆಯೊಬ್ಬರು, ಅಧಿಕಾರಿಗಳ ಮಾತಿನಿಂದ ನೊಂದು ತುಂಬಿದ ಸಭೆಯಲ್ಲಿ ಶಾಸಕರ ಎದುರೇ ಕಣ್ಣೀರಿಟ್ಟ ಘಟನೆ ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮದಲ್ಲಿ ನಡೆದಿದೆ.

ಶೃಂಗೇರಿ ತಾಲೂಕಿನ ಗಂಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಮ್ಮೆ ಗ್ರಾಮದ ಮಹಿಳೆ, ಶನಿವಾರ ನಡೆದ ಜನಸೇವಾ ಕಾರ್ಯಕ್ರಮದಲ್ಲಿ ಶೌಚಾಲಯದ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದಿದ್ದಾರೆ.


ಈ ವೇಳೆ ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಮಹಿಳೆಯನ್ನು ನೀವು ಎಸ್ಸಿ-ಎಸ್ಟಿ ಸಮುದಾಯಕ್ಕೆ ಸೇರಿದವರೇ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಮಹಿಳೆ ತಾನು ಬ್ರಾಹ್ಮಣ ಸಮುದಾಯಕ್ಕೆ ಸೇರಿದವಳು ಎಂದು ತಿಳಿಸಿದ್ದಾರೆ.

ಜನರಲ್ ಕೆಟಗರಿಗೆ ಸೇರಿದವರಿಗೆ ಯೋಜನೆಯಡಿ ಸಮಸ್ಯೆಯಾಗುತ್ತದೆ ಎಂಬ ಅಧಿಕಾರಿಗಳ ಮಾತಿನಿಂದ ನೊಂದ ಮಹಿಳೆ, “ಶೌಚಾಲಯ ನಿರ್ಮಿಸಿಕೊಡಲು ಕೂಡ ಜಾತಿ ಬೇಕಾ?” ಎಂದು ಸಭೆಯಲ್ಲೇ ಕಣ್ಣೀರಿಟ್ಟಿದ್ದಾರೆ.


ಕಳೆದ ಐದಾರು ವರ್ಷಗಳಿಂದ ಶೌಚಾಲಯಕ್ಕಾಗಿ ಅಧಿಕಾರಿಗಳ ಬಳಿ ಮನವಿ ಮಾಡುತ್ತಿದ್ದರೂ, ಒಂದಲ್ಲೊಂದು ಕಾರಣ ನೀಡಿ ತಮ್ಮನ್ನು ವಾಪಸ್ ಕಳುಹಿಸಲಾಗುತ್ತಿದೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.

ಮಹಿಳೆಯ ಅಳಲು ಆಲಿಸಿದ ಶಾಸಕ ರಾಜೇಗೌಡ, ಅಧಿಕಾರಿಗಳಿಗೆ ಶೌಚಾಲಯ ನಿರ್ಮಿಸಿಕೊಡುವಂತೆ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಭಾನುವಾರ ತಾಲೂಕು ಮಟ್ಟದ ಅಧಿಕಾರಿಗಳು ಚಿಮ್ಮೆ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಶೌಚಾಲಯ ನಿರ್ಮಾಣಕ್ಕೆ ಎದುರಾಗಿರುವ ತಾಂತ್ರಿಕ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದ ಅಧಿಕಾರಿಗಳು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಿ ಮಹಿಳೆಗೆ ಶೌಚಾಲಯ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ.