ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತ ಅರಣ್ಯದ ಪುಣಜನೂರು ವಲಯದಲ್ಲಿ ಮರ ಬಿದ್ದು ಕಾಡಾನೆ ಮರಿಗೆ ಗಂಭೀರ ಗಾಯವಾಗಿದೆ.
ಚಾಮರಾಜನಗರ: ಮರ ಉರುಳಿ ಬಿದ್ದು ಕಾಡಾನೆ ಮರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತ ಅರಣ್ಯದ ಪುಣಜನೂರು ವಲಯದಲ್ಲಿ ನಡೆದಿದೆ.
ಮರಿಯಾನೆ ಮೇಲೆ ಮರ ಬಿದ್ದಿರುವುದನ್ನು ಗಮನಿಸಿದ ಅರಣ್ಯ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ತೆರಳಿ ಜೆಸಿಬಿ ಮೂಲಕ ಮರವನ್ನು ತೆರವುಗೊಳಿಸಿದ್ದಾರೆ. ಆದರೆ ಗಾಯಗೊಂಡ ಮರಿಯಾನೆ ಎದ್ದೇಳಲು ಸಾಧ್ಯವಾಗದೆ ಒದ್ದಾಡುತ್ತಿದ್ದು, ಅದಕ್ಕೆ ಚಿಕಿತ್ಸೆ ನೀಡಲು ಅರಣ್ಯ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ.
ಇತ್ತ ಗಾಯಗೊಂಡ ಮರಿಯಾನೆಯನ್ನು ಬಿಟ್ಟು ತಾಯಿಯಾನೆ ಕದಲದೆ ಸ್ಥಳದಲ್ಲೇ ನಿಂತಿದೆ. ತಾಯಿಯಾನೆಯನ್ನು ಅಲ್ಲಿಂದ ದೂರ ಸರಿಸಲು ಅರಣ್ಯ ಸಿಬ್ಬಂದಿ ಹಲವು ಬಾರಿ ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಇದರಿಂದ ಮರಿಯಾನೆಗೆ ಚಿಕಿತ್ಸೆ ನೀಡಲು ಸಿಬ್ಬಂದಿಗೆ ತೊಡಕು ಎದುರಾಗಿದೆ.
ಮರಿಯಾನೆಯನ್ನು ಎಬ್ಬಿಸಲು ತಾಯಿಯಾನೆ ಪದೇಪದೇ ಪ್ರಯತ್ನಿಸುತ್ತಿರುವ ದೃಶ್ಯ ಕಂಡುಬಂದಿದೆ. ಮರಿಯಾನೆಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮುಂದಿನ ಚಿಕಿತ್ಸೆ ಹಾಗೂ ರಕ್ಷಣಾ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳುತ್ತಿದ್ದಾರೆ.
ಮರಿಯಾನೆ ಮೇಲೆ ಮರ ಉರುಳಿ ಬಿದ್ದಿರುವುದು ಹೇಗೆ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಘಟನೆ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.