ಹೋಟೆಲ್‌ಗಳಲ್ಲಿ ಅಡುಗೆ ಎಣ್ಣೆ ಮರುಬಳಕೆ ತಡೆಯಲು ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. 

ತುಮಕೂರು: ಹೋಟೆಲ್‌ಗಳಲ್ಲಿ ಅಡುಗೆ ಎಣ್ಣೆ ಮರುಬಳಕೆ ಮಾಡುವುದನ್ನು ತಡೆಯಲು ಶೀಘ್ರ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.


ತುಮಕೂರಿನ ಡಿಹೆಚ್‌ಒ ಕಚೇರಿಯಲ್ಲಿ ಆರೋಗ್ಯ ಇಲಾಖೆ ಸಭೆ ಬಳಿಕ ಮಾತನಾಡಿದ ಸಚಿವರು, ಎಣ್ಣೆಯನ್ನು ಎಲ್ಲಿ ಖರೀದಿಸಲಾಗುತ್ತದೆ ಎಂಬುದನ್ನು ನೋಂದಣಿ ಮಾಡುವ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಚಿಂತನೆ ನಡೆದಿದೆ ಎಂದರು. ಬಳಕೆಯ ಬಳಿಕ ಉಳಿಯುವ ಎಣ್ಣೆಯ ಪ್ರಮಾಣದ ಮಾಹಿತಿಯನ್ನೂ ಆ್ಯಪ್ ಮೂಲಕ ದಾಖಲಿಸುವ ಯೋಜನೆ ಇದೆ ಎಂದು ತಿಳಿಸಿದರು.


ಇನ್ನು ಜಿಲ್ಲೆಯಲ್ಲಿ ಔಷಧ ಹಾಗೂ ವೈದ್ಯಕೀಯ ಉಪಕರಣಗಳ ಕೊರತೆ ಇದ್ದು, ಅದನ್ನು ಶೀಘ್ರ ನಿವಾರಿಸಲಾಗುವುದು ಎಂದು ಸಚಿವರು ಹೇಳಿದರು. ರಾಜ್ಯಾದ್ಯಂತ ವೈದ್ಯರು ಹಾಗೂ ಫಾರ್ಮಾಸಿಸ್ಟ್‌ಗಳ ಕೊರತೆ ಇದ್ದರೂ, ತುಮಕೂರು ಜಿಲ್ಲೆಯಲ್ಲಿ ಶೇ.100ರಷ್ಟು ವೈದ್ಯರ ಲಭ್ಯತೆ ಇದೆ ಎಂದು ತಿಳಿಸಿದರು.


ನಕಲಿ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ ಯು.ಟಿ. ಖಾದರ್, ಅಧಿಕಾರಿಗಳು ಅಥವಾ ರಾಜಕಾರಣಿಗಳು ಬೆಂಬಲಿಸಿದರೂ ಕ್ರಮದಿಂದ ಹಿಂದೆ ಸರಿಯುವುದಿಲ್ಲ ಎಂದರು. 15 ದಿನಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.


ಇನ್ನು ಸಿಎಂ ಸ್ಟಿಂಗ್ ಆಪರೇಷನ್ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ತಮಗೆ ಮಾಹಿತಿ ಇಲ್ಲ. ಕ್ಯಾಬಿನೆಟ್ ಸಭೆಯಿಂದ ಬೇಗ ತೆರಳಿದ್ದರಿಂದ ಅಲ್ಲಿ ನಡೆದ ಚರ್ಚೆಯ ಕುರಿತು ತಿಳಿದಿಲ್ಲ ಎಂದು ಹೇಳಿದರು.