ಲಕ್ನೋದಲ್ಲಿ ಉದ್ಯಮಿ ಶಿವ ಶರ್ಮಾ ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮೃತನ ತಾಯಿ ಮಾಡೆಲ್ ಶ್ರದ್ಧಾ ದುಬೆ ವಿರುದ್ಧ ಕೊಲೆ, ಹಲ್ಲೆ ಮತ್ತು ಬ್ಲ್ಯಾಕ್ಮೇಲ್ ಆರೋಪ ಮಾಡಿದ್ದಾರೆ.
ಫ್ಲ್ಯಾಟ್ನ ನಾಲ್ಕನೇ ಮಹಡಿಯಿಂದ ಬಿದ್ದು ಉದ್ಯಮಿ ಶಿವ ಶರ್ಮಾ ಮೃತಪಟ್ಟ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಅಕ್ಟೋಬರ್ 9ರಂದು ನಡೆದ ಈ ಘಟನೆಯ ಸಂಬಂಧ ಮೃತನ ತಾಯಿ ರಂಜನಾ ಶರ್ಮಾ, ಮಾಡೆಲ್ ಹಾಗೂ ಸಾಮಾಜಿಕ ಜಾಲತಾಣದ ಪ್ರಭಾವಿ ಶ್ರದ್ಧಾ ದುಬೆ ವಿರುದ್ಧ ಕೊಲೆ, ಹಲ್ಲೆ ಮತ್ತು ಬ್ಲ್ಯಾಕ್ಮೇಲ್ ಆರೋಪ ಮಾಡಿದ್ದಾರೆ.
ತಮ್ಮ ಮಗನ ದೇಹದ ಮೇಲೆ ಗಾಯದ ಗುರುತುಗಳಿದ್ದವು ಎಂದು ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೆ, ಶಿವ ಮೃತಪಟ್ಟ ಸುಮಾರು 15 ನಿಮಿಷಗಳ ಬಳಿಕ ಅಪಾರ್ಟ್ಮೆಂಟ್ಗೆ ಬಂದ ಬಿಳಿ ಆಡಿ ಕಾರಿನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎನ್ನಲಾಗಿದ್ದು, ಕಾರಿನಲ್ಲಿ ಬಂದವರ ಗುರುತು ಪತ್ತೆಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ತನಿಖೆಯ ಭಾಗವಾಗಿ ಅಪಾರ್ಟ್ಮೆಂಟ್ ಮತ್ತು ಆಸ್ಪತ್ರೆಯ ಸಿಸಿಟಿವಿ ದೃಶ್ಯಗಳು ಹಾಗೂ ಶಿವ ಮತ್ತು ಶ್ರದ್ಧಾ ನಡುವಿನ ಚಾಟ್ಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ವರದಿಯಾಗಿದೆ.
ತಾಯಿಯ ದೂರಿನ ಆಧಾರದ ಮೇಲೆ ಶ್ರದ್ಧಾ ದುಬೆ ಸೇರಿದಂತೆ ಐವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಶ್ರದ್ಧಾಳ ಪತ್ತೆಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಉದ್ಯಮಿಯ ಸಾವಿನ ಹಿಂದಿನ ನಿಖರ ಕಾರಣ ತನಿಖೆಯ ಬಳಿಕವೇ ತಿಳಿಯಬೇಕಿದೆ.