Bigg Boss Kannada 13 : ಬಿಗ್ ಬಾಸ್ ಮನೆಯಲ್ಲಿ ಜಾರಿಬಿದ್ದು ಕಾಲು ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಓಂ ಪ್ರಕಾಶ್ ರಾವ್ ಶೋನಿಂದ ಹೊರಬಂದಿದ್ದಾರೆ.
ಬಿಗ್ ಬಾಸ್ ಸೀಸನ್ 13 ಆರಂಭವಾಗಿ ಎರಡನೇ ವಾರದಲ್ಲೇ ನಿರ್ದೇಶಕ ಓಂ ಪ್ರಕಾಶ್ ರಾವ್ ಅನಾರೋಗ್ಯದ ಕಾರಣ ದೊಡ್ಮನೆಯಿಂದ ಹೊರಬಂದಿದ್ದಾರೆ.
ಸೆಪ್ಟೆಂಬರ್ 13ರಂದು ಓಂ ಪ್ರಕಾಶ್ ರಾವ್ ಬಿಗ್ ಬಾಸ್ ಮನೆಯಿಂದ ಹೊರನಡೆದಿದ್ದಾರೆ. ಇದೀಗ ಅವರು ಖಾಸಗಿ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಾಗಾದರೆ ಓಂ ಪ್ರಕಾಶ್ ರಾವ್ ಬಿಗ್ ಬಾಸ್ ಮನೆಯಿಂದ ಹೊರಬರಲು ಕಾರಣವೇನು?
ಬಿಗ್ ಬಾಸ್ ಮನೆಯಲ್ಲಿ ಓಡಾಡುವಾಗ ಸ್ಲಿಪ್ ಆಗಿ ಬಿದ್ದ ಪರಿಣಾಮ ಅವರ ಕಾಲಿನ ನೋವು ಹೆಚ್ಚಾಗಿದೆ. ನೋವು ಜಾಸ್ತಿಯಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 13ರ ಮಧ್ಯಾಹ್ನ ಬಿಗ್ ಬಾಸ್ ಆಯೋಜಕರು ಅವರನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ.
ವೈದ್ಯರು ಪರೀಕ್ಷಿಸಿದ ಬಳಿಕ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ ಎಂದು ಓಂ ಪ್ರಕಾಶ್ ರಾವ್ ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ಓಂ ಪ್ರಕಾಶ್ ರಾವ್ ಅವರಿಗೆ ಸುಮಾರು 15 ವರ್ಷಗಳ ಹಿಂದೆ ಅಪಘಾತವಾಗಿತ್ತು. ಆ ವೇಳೆ ತೊಡೆ ಹಾಗೂ ಬಲ ಸೊಂಟದ ಭಾಗಕ್ಕೆ ಗಂಭೀರವಾಗಿ ಪೆಟ್ಟಾಗಿತ್ತು. ಬಿಗ್ ಬಾಸ್ ಮನೆಗೆ ಹೋದ ಬಳಿಕ ಸಾಕಷ್ಟು ವಿಶ್ರಾಂತಿ ಇಲ್ಲದೆ ಇರುವುದರಿಂದ ಹಳೆಯ ನೋವು ಮತ್ತೆ ಹೆಚ್ಚಾಗಿದೆ ಎನ್ನಲಾಗಿದೆ.
ತಮ್ಮ ರೆಗ್ಯುಲರ್ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವ ಸಲುವಾಗಿ ಓಂ ಪ್ರಕಾಶ್ ರಾವ್ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಸದ್ಯ ಅವರು ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿದ್ದ ಖಾಸಗಿ ಆಸ್ಪತ್ರೆಯಲ್ಲೇ ದಾಖಲಾಗಿದ್ದಾರೆ.
ಇನ್ನು ಬಿಗ್ ಬಾಸ್ ಮನೆಗೆ ಹೋದ ಬಳಿಕ ಓಂ ಪ್ರಕಾಶ್ ರಾವ್ ಅವರ ಬಿಪಿ ಮತ್ತು ಶುಗರ್ ಕೂಡ ಹೆಚ್ಚಾಗಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ವೈದ್ಯರ ಸಲಹೆಯಂತೆ ವಾರಕ್ಕೆ ಒಮ್ಮೆ ಫಿಸಿಯೋಥೆರಪಿ ಮಾಡಿಸಿಕೊಳ್ಳಬೇಕು ಹಾಗೂ ಸದ್ಯಕ್ಕೆ ಎರಡು ವಾರ ಸಂಪೂರ್ಣ ವಿಶ್ರಾಂತಿ ಪಡೆಯಬೇಕು ಎನ್ನಲಾಗಿದೆ.
ಸದ್ಯ ಓಂ ಪ್ರಕಾಶ್ ರಾವ್ ಅವರಿಗೆ ನೋವು ಬಿಟ್ಟು ಬಿಟ್ಟು ಬರುತ್ತಿದ್ದು, ಆಸ್ಪತ್ರೆಯಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ವಿಶ್ರಾಂತಿ ತೆಗೆದುಕೊಳ್ಳದೆ ಇದ್ದರೆ ಮುಂದಿನ ದಿನಗಳಲ್ಲಿ ಆಪರೇಷನ್ ಮಾಡಬೇಕಾಗುವ ಸಾಧ್ಯತೆಯೂ ಇದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.