ಬಿಗ್‌ಬಾಸ್ ಕನ್ನಡ ಸೀಸನ್ 13ರಿಂದ ಆರೋಗ್ಯದ ಕಾರಣಕ್ಕೆ ಹೊರಬಂದ ನಿರ್ದೇಶಕ ಓಂ ಪ್ರಕಾಶ್ ರಾವ್, ಊಟ-ತಿಂಡಿಯಿಂದ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 13ರ ಸ್ಪರ್ಧಿ ಹಾಗೂ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಆರೋಗ್ಯದ ಕಾರಣಕ್ಕೆ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ. ಕಾಲು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಇದೀಗ ಬಿಗ್‌ಬಾಸ್ ತಂಡದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಕಾರ್ಯಕ್ರಮಕ್ಕೆ ತೆರಳುವ ಮುನ್ನವೇ ತಮಗೆ ಶುಗರ್ ಇರುವುದನ್ನು ಹಾಗೂ ಆಹಾರದ ವಿಚಾರದಲ್ಲಿ ವಿಶೇಷ ಕಾಳಜಿ ವಹಿಸುವಂತೆ ತಂಡಕ್ಕೆ ತಿಳಿಸಿದ್ದೆ ಎಂದು ಓಂ ಪ್ರಕಾಶ್ ರಾವ್ ಹೇಳಿದ್ದಾರೆ. ಆದರೆ ಬಿಗ್‌ಬಾಸ್ ಮನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅನ್ನ ನೀಡಲಾಗುತ್ತಿತ್ತು. ಇದರಿಂದ ತಮ್ಮ ಶುಗರ್ ಮಟ್ಟ 400 ದಾಟಿದ್ದು, ಬಿಪಿ 180/90ಕ್ಕೆ ಏರಿತ್ತು ಎಂದು ಅವರು ತಿಳಿಸಿದ್ದಾರೆ.


ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾಗಿದ್ದರೆ ಸ್ಟ್ರೋಕ್ ಆಗುವ ಸಾಧ್ಯತೆ ಇತ್ತು ಎಂದು ವೈದ್ಯರು ತಿಳಿಸಿದ್ದರು ಎಂದು ಓಂ ಪ್ರಕಾಶ್ ರಾವ್ ಹೇಳಿದ್ದಾರೆ. ಈ ವಿಚಾರವಾಗಿ ಬಿಗ್‌ಬಾಸ್ ತಂಡದ ವಿರುದ್ಧ ಬೇಸರ ವ್ಯಕ್ತಪಡಿಸಿರುವ ಅವರು, ತಮ್ಮ ಆರೋಗ್ಯಕ್ಕೆ ಏನಾದರೂ ಆಗಿದ್ದರೆ ಯಾರು ಜವಾಬ್ದಾರರು ಎಂಬ ಪ್ರಶ್ನೆಯನ್ನೂ ಮುಂದಿಟ್ಟಿದ್ದಾರೆ.


ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಕೂಡಲೇ ತಮ್ಮನ್ನು ಆಸ್ಪತ್ರೆಗೆ ಕರೆತರಲಾಯಿತು. ಬಳಿಕ ಫ್ಯಾಮಿಲಿ ಡಾಕ್ಟರ್ ಜೊತೆ ಚರ್ಚಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಶಿಫ್ಟ್ ಆಗಿದ್ದೇನೆ. ಸದ್ಯ 15 ದಿನಗಳ ಕಾಲ ಚಿಕಿತ್ಸೆ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕೇವಲ ಎರಡು ವಾರದಲ್ಲೇ ಬಿಗ್‌ಬಾಸ್ ಮನೆಯಿಂದ ಹೊರಬರಬೇಕಾಯಿತು ಎಂಬ ಬೇಸರವೂ ಇದೆ ಎಂದು ಓಂ ಪ್ರಕಾಶ್ ರಾವ್ ಹೇಳಿದ್ದಾರೆ. ಜನರ ಬೇಡಿಕೆಯಿಂದಲೇ ತಾವು ಬಿಗ್‌ಬಾಸ್ ಮನೆಗೆ ಹೋಗಿದ್ದೆ. ಆದರೆ ಆರೋಗ್ಯ ಕೈಕೊಟ್ಟ ಹಿನ್ನೆಲೆಯಲ್ಲಿ ಹೊರಬರಬೇಕಾಯಿತು ಎಂದು ತಿಳಿಸಿದ್ದಾರೆ.

ತಮಗಾಗಿ ಪ್ರತ್ಯೇಕ ಆಹಾರ ಕಳುಹಿಸುವುದು ಬಿಗ್‌ಬಾಸ್ ತಂಡಕ್ಕೆ ಕಷ್ಟವಾಗಿರಬಹುದು. ಆದರೆ ಆರೋಗ್ಯ ಮತ್ತು ಆಹಾರದ ಬಗ್ಗೆ ಮೊದಲೇ ಮಾಹಿತಿ ನೀಡಿದ್ದೆ ಎಂದು ಅವರು ಹೇಳಿದ್ದಾರೆ.


ಇನ್ನು ಬಿಗ್‌ಬಾಸ್ ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್ ಅವರು ಬೆಳಗ್ಗೆ ಕರೆ ಮಾಡಿದ್ದರು. ಆದರೆ ತಾವು ಚೆಕಪ್‌ಗೆ ಹೋಗಿದ್ದ ಕಾರಣ ಮಾತನಾಡಲು ಸಾಧ್ಯವಾಗಲಿಲ್ಲ. ಮತ್ತೆ ಸುದೀಪ್ ಅವರೊಂದಿಗೆ ಮಾತನಾಡುವುದಾಗಿ ಓಂ ಪ್ರಕಾಶ್ ರಾವ್ ತಿಳಿಸಿದ್ದಾರೆ.

15 ದಿನಗಳ ಚಿಕಿತ್ಸೆಯ ಬಳಿಕ ವೈದ್ಯರ ಸಲಹೆ ಪಡೆದು, ಆರೋಗ್ಯ ಸ್ಥಿತಿ ಹೇಗಿರುತ್ತದೆ ಎಂಬುದನ್ನು ನೋಡಿಕೊಂಡು ಮತ್ತೆ ಬಿಗ್‌ಬಾಸ್‌ಗೆ ಅವಕಾಶ ಸಿಕ್ಕರೆ ಏನು ಮಾಡಬೇಕು ಎಂಬುದನ್ನು ನಿರ್ಧರಿಸುವುದಾಗಿ ಅವರು ಹೇಳಿದ್ದಾರೆ.