BIGBOSS 13ರ ಮೊದಲ ದಿನವೇ ಪ್ರಥಮಾ ಪ್ರಸಾದ್ ಅವರನ್ನು ‘ಆಂಟಿ’ ಎಂದು ಕರೆದ ವಿಚಾರ ವಿವಾದಕ್ಕೆ ಕಾರಣವಾಗಿದೆ.
BIGBOSS 13 ಅಗ್ನಿಪರೀಕ್ಷೆ ಮೂಲಕ ದೊಡ್ಮನೆ ಪ್ರವೇಶಿಸಿರುವ ಕಿರಣ್ ಶಾಸ್ತ್ರಿ ಅವರು ಪ್ರಥಮಾ ಪ್ರಸಾದ್ ಅವರನ್ನು ನೋಡಿ ‘ಆಂಟಿ ಬನ್ನಿ ಇಲ್ಲಿ’ ಎಂದು ಕರೆದಿದ್ದಾರೆ ಎನ್ನಲಾಗಿದೆ.
ಇದರಿಂದ ಅಸಮಾಧಾನಗೊಂಡ ಪ್ರಥಮಾ, ತಮ್ಮ ಆಕ್ಷೇಪವನ್ನು ನೇರವಾಗಿ ವ್ಯಕ್ತಪಡಿಸಿದ್ದಾರೆ. ‘ನನ್ನನ್ನು ಆಂಟಿ ಎಂದು ಕರೆಯಬೇಡಿ. ನನಗೆ ನನ್ನದೇ ಆದ ಹೆಸರಿದೆ. ನನ್ನ ಹೆಸರು ಪ್ರಥಮಾ ಅಂತ. ಹಾಗೆಯೇ ಕರೆಯಿರಿ’ ಎಂದು ಹೇಳಿದ್ದಾರೆ.
ಇಷ್ಟಕ್ಕೆ ವಿವಾದ ನಿಲ್ಲಲಿಲ್ಲ. ಮಾಡರ್ನ್ ಮಹಾಕವಿ ಮಂಜ ಅವರು ಕೂಡ ಪ್ರಥಮಾ ಅವರ ದೇಹದ ಗಾತ್ರವನ್ನು ಗುರಿಯಾಗಿಸಿಕೊಂಡಂತೆ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅವರ ಮಾತುಗಳಿಗೆ ಪ್ರಥಮಾ ಪ್ರಸಾದ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ ‘ಬಾಡಿ ಶೇಮಿಂಗ್ ಮಾಡೋದು ಸರಿ ಅಲ್ಲ’ ಎಂದು ಹೇಳಿದ್ದಾರೆ.
ಈ ಘಟನೆ ಬಳಿಕ ದೊಡ್ಮನೆಯಲ್ಲಿ ಕೆಲಕಾಲ ವಾತಾವರಣ ಬಿಗುವಿನಿಂದ ಕೂಡಿತ್ತು ಎನ್ನಲಾಗಿದೆ. ಮೊದಲ ದಿನವೇ ಈ ರೀತಿಯ ಘಟನೆ ನಡೆದಿರುವುದು ಬಿಗ್ ಬಾಸ್ ವೀಕ್ಷಕರ ಗಮನ ಸೆಳೆದಿದೆ.
ಈ ಬಾರಿ ‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಸಾಮಾನ್ಯರಿಗೂ ಅವಕಾಶ ನೀಡಲಾಗಿದೆ. ಸುಮಾರು 60 ಮಂದಿ ಸಾಮಾನ್ಯರನ್ನು ಆಡಿಷನ್ ಮಾಡಲಾಗಿದ್ದು, ಅವರಲ್ಲಿ ಧನುಷ್, ಲಿಖಿತ್, ಮಾಡರ್ನ್ ಮಹಾಕವಿ ಮಂಜ ಹಾಗೂ ಕಿರಣ್ ಶಾಸ್ತ್ರಿ ಆಯ್ಕೆಯಾಗಿದ್ದಾರೆ.
ಕಿರಣ್ ಶಾಸ್ತ್ರಿ ಅವರು ಮುಖ ನೋಡಿ ಭವಿಷ್ಯ ಹೇಳುವ ಕಲೆ ಹೊಂದಿರುವುದಾಗಿ ಹೇಳಿಕೊಂಡಿದ್ದು, ದೊಡ್ಮನೆ ಪ್ರವೇಶಿಸಿದ ಬಳಿಕ ಸ್ಪರ್ಧಿಗಳ ಮುಖ ನೋಡಿ ಭವಿಷ್ಯ ಹೇಳುವಂತೆ ಸೂಚಿಸಲಾಗಿತ್ತು.
ಆದರೆ, ಆರಂಭದಲ್ಲೇ ನಡೆದ ಈ ಮಾತಿನ ವಿವಾದ ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಪಡೆಯಲಿದೆ ಎಂಬ ಕುತೂಹಲ ಮೂಡಿದೆ. ಕಿರಣ್ ಶಾಸ್ತ್ರಿ ಮತ್ತು ಮಾಡರ್ನ್ ಮಹಾಕವಿ ಮಂಜ ತಮ್ಮ ಮಾತಿನ ಬಗ್ಗೆ ಸ್ಪಷ್ಟನೆ ನೀಡುತ್ತಾರೆಯೇ ಅಥವಾ ವಿವಾದ ಮತ್ತಷ್ಟು ಮುಂದುವರಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.