ಬಿಗ್ ಬಾಸ್ ಕನ್ನಡ ಮನೆಯಲ್ಲಿ ದಿಢೀರ್ ‘Emergency Exit’ ಟ್ವಿಸ್ಟ್ ನೀಡಲಾಗಿದೆ. ಸೈರನ್ ಬಳಿಕ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟು, ಈ ವಾರ ಯಾರೂ ಉಳಿಯುವ ಗ್ಯಾರಂಟಿ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು: ಬಿಗ್ ಬಾಸ್ ಕನ್ನಡ ಮನೆಯಲ್ಲಿ ಎರಡನೇ ವಾರ ಮುಗಿಸಿ ಮೂರನೇ ವಾರಕ್ಕೆ ಕಾಲಿಟ್ಟಿರುವ ಸ್ಪರ್ಧಿಗಳಿಗೆ ದಿಢೀರ್ ಶಾಕ್ ಎದುರಾಗಿದೆ. ಬೆಳಗಿನ ಜಾವ ಮನೆಯಲ್ಲೇ ಏಕಾಏಕಿ ಡೇಂಜರ್ ಸೈರನ್ ಮೊಳಗಿದ್ದು, ನಿದ್ದೆಯಲ್ಲಿದ್ದ ಸ್ಪರ್ಧಿಗಳು ಗಾಬರಿಯಿಂದ ಲಿವಿಂಗ್ ಏರಿಯಾಗೆ ಬಂದಿದ್ದಾರೆ.

ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ, ಮನೆಯಲ್ಲೆಲ್ಲಾ ಕೆಂಪು ಬಣ್ಣದ ಲೈಟ್‌ಗಳು ಆವರಿಸಿ ಸೈರನ್ ಮೊಳಗುತ್ತದೆ. ಬಳಿಕ ಟಿವಿ ಪರದೆಯ ಮೇಲೆ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು, ಸ್ಪರ್ಧಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.


“ಈ ಜರ್ನಿಯಲ್ಲಿ ಈಗೊಂದು ಎಮರ್ಜೆನ್ಸಿ ಬಂದಿದೆ. ಈ ವಾರ ಈ ಮನೆಯಲ್ಲಿ ಯಾರೂ ಉಳಿಯೋದು ಗ್ಯಾರಂಟಿ ಇಲ್ಲ” ಎಂದು ಸುದೀಪ್ ಹೇಳುವ ಮೂಲಕ ಹೊಸ ಟ್ವಿಸ್ಟ್ ನೀಡಿದ್ದಾರೆ.


ಸಾಮಾನ್ಯವಾಗಿ ಸ್ಪರ್ಧಿಗಳೇ ಪರಸ್ಪರ ನಾಮಿನೇಟ್ ಮಾಡುತ್ತಿದ್ದರು. ಆದರೆ ಈ ಬಾರಿ ಪ್ರತಿಯೊಬ್ಬ ಕಂಟೆಸ್ಟೆಂಟ್‌ನ್ನೂ ಬಿಗ್ ಬಾಸ್ ತಂಡವೇ ನಾಮಿನೇಟ್ ಮಾಡುತ್ತಿದೆ ಎಂದು ಪ್ರೋಮೋದಲ್ಲಿ ಸೂಚಿಸಲಾಗಿದೆ. ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು, ಯಾರು ಬೇಕಾದರೂ ಮನೆಯಿಂದ ಹೊರಹೋಗಬಹುದು ಎಂಬ ‘Emergency Exit’ ಟ್ವಿಸ್ಟ್ ಸ್ಪರ್ಧಿಗಳಲ್ಲಿ ಆತಂಕ ಮೂಡಿಸಿದೆ.

ಇದರಿಂದ ಬಿಗ್ ಬಾಸ್ ಮನೆಯ ಆಟ ಮತ್ತಷ್ಟು ಕುತೂಹಲ ಮೂಡಿಸಿದ್ದು, ಈ ವಾರ ಯಾರಿಗೆ ಎಮರ್ಜೆನ್ಸಿ ಎಕ್ಸಿಟ್ ಎದುರಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.