ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ಭರ್ಜರಿ ಬದಲಾವಣೆ. ಮನೆಯಿಂದ ಮೂವರು ಸ್ಪರ್ಧಿಗಳು ಹೊರಬಂದ ಬೆನ್ನಲ್ಲೇ, ಮೂವರು ಹೊಸ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಗೆ ಎಂಟ್ರಿ ಕೊಡುತ್ತಿದ್ದಾರೆ.
ಭಾನುವಾರದ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಅವರು ಗಾನವಿ, ಕಮಿಡಿಯನ್ ಪ್ರಶಾಂತ್ ಹಾಗೂ ಸೋನಿಕಾ ಗೌಡ ಅವರನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ.
‘ಹಳ್ಳಿ ಪವರ್’ ರಿಯಾಲಿಟಿ ಶೋ ಮೂಲಕ ಗಮನ ಸೆಳೆದಿರುವ ಗಾನವಿ, ಕಂಟೆಂಟ್ ಕ್ರಿಯೇಟರ್ ಆಗಿಯೂ ಗುರುತಿಸಿಕೊಂಡಿದ್ದಾರೆ. ನೇರ ಮಾತು ಹಾಗೂ ದಿಟ್ಟ ವ್ಯಕ್ತಿತ್ವದ ಮೂಲಕ ಗಮನ ಸೆಳೆದಿರುವ ಅವರು, ಬಿಗ್ಬಾಸ್ ಮೂಲಕ ಇನ್ನಷ್ಟು ಜನಪ್ರಿಯತೆ ಪಡೆಯುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಕಮಿಡಿಯನ್ ಪ್ರಶಾಂತ್ ಕಾಮಿಡಿ ರಿಯಾಲಿಟಿ ಶೋಗಳು ಹಾಗೂ ರೀಲ್ಸ್ ಮೂಲಕ ಜನಪ್ರಿಯರಾಗಿದ್ದಾರೆ. ಬಿಗ್ಬಾಸ್ ಸ್ಪರ್ಧಿಗಳ ಸ್ಪೂಫ್ಗಳನ್ನೂ ಮಾಡಿದ್ದ ಪ್ರಶಾಂತ್, ಮನೆಯಲ್ಲಿ ಜಗಳಕ್ಕಿಂತ ಫನ್ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಬಂದಿರುವುದಾಗಿ ಹೇಳಿದ್ದಾರೆ.
ಮೂರನೇ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಸೋನಿಕಾ ಗೌಡ ಬಿಗ್ಬಾಸ್ ಮನೆ ಪ್ರವೇಶಿಸಿದ್ದಾರೆ. ಉದ್ಯಮಿ, ಫ್ಯಾಷನ್ ಡಿಸೈನರ್ ಹಾಗೂ ಮಾಜಿ ನಟಿಯಾಗಿರುವ ಸೋನಿಕಾ, ಮತ್ತೆ ನಟನೆಯಲ್ಲಿ ಮುಂದುವರಿಯುವ ಆಸೆ ಹೊಂದಿದ್ದು, ಬಿಗ್ಬಾಸ್ ವೇದಿಕೆ ತಮ್ಮ ವೃತ್ತಿಜೀವನಕ್ಕೆ ಸಹಕಾರಿಯಾಗಬಹುದು ಎಂದು ಹೇಳಿದ್ದಾರೆ.
ಈ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳನ್ನು ಭಾನುವಾರದ ಎಪಿಸೋಡ್ನಲ್ಲಿ ಪರಿಚಯಿಸಲಾಗಿದ್ದು, ಸ್ಪರ್ಧಿಗಳಿಗೆ ಅವರ ಪರಿಚಯ ಇನ್ನಷ್ಟೇ ಆಗಬೇಕಿದೆ. ಸೋಮವಾರದ ಎಪಿಸೋಡ್ನಲ್ಲಿ ಹೊಸ ಸ್ಪರ್ಧಿಗಳು ಮನೆ ಪ್ರವೇಶಿಸುವ ಸಾಧ್ಯತೆ ಇದೆ. ಇದೇ ವೇಳೆ ಮಿಡ್ ವೀಕ್ ಎಲಿಮಿನೇಷನ್ನಲ್ಲಿ ಹೊರಬಂದಿರುವ ತಾಂಡವ್ ಕೂಡ ಮತ್ತೆ ಬಿಗ್ಬಾಸ್ ಮನೆಗೆ ಮರಳುವ ಸಾಧ್ಯತೆ ಇದೆ.