ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆಗೆ ಸರ್ಕಾರ ಮುಂದಾಗಿದೆ. ಆಗಸ್ಟ್ 31ರಂದು ಹೊಸ ಮಾರ್ಗಸೂಚಿ ಬಿಡುಗಡೆಯಾಗಲಿದ್ದು, ಮೂರು ದಿನಗಳ ಬಳಿಕ ಸರ್ವೆ ಆರಂಭವಾಗುವ ಸಾಧ್ಯತೆ ಇದೆ. ಅನರ್ಹರನ್ನು ಪತ್ತೆಹಚ್ಚಿದ ಬಳಿಕ ಗೃಹಲಕ್ಷ್ಮೀ ಹಣ ಪಾವತಿಯಾಗಲಿದೆ ಎನ್ನಲಾಗಿದೆ.
ಬೆಂಗಳೂರು: ಗೃಹಲಕ್ಷ್ಮೀ ಯೋಜನೆಗೆ ಮೂರು ವರ್ಷ ಪೂರ್ಣಗೊಳ್ಳುತ್ತಿರುವ ಹೊತ್ತಲ್ಲೇ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆಗೆ ಸರ್ಕಾರ ಮುಂದಾಗಿದ್ದು, ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಇಂದು, ಆಗಸ್ಟ್ 31ರಂದು ಗೃಹಲಕ್ಷ್ಮೀ ಯೋಜನೆಯ ಮರುಪರಿಶೀಲನೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ. ಮಾರ್ಗಸೂಚಿ ಬಿಡುಗಡೆಯಾದ ಬಳಿಕ ಮೂರು ದಿನಗಳಲ್ಲಿ ಫಲಾನುಭವಿಗಳ ಮರುಪರಿಶೀಲನೆಗಾಗಿ ಸರ್ವೆ ಆರಂಭವಾಗುವ ಸಾಧ್ಯತೆ ಇದೆ.
ಸರ್ವೆ ಮೂಲಕ ಗೃಹಲಕ್ಷ್ಮೀ ಯೋಜನೆಯ ಅರ್ಹ ಮತ್ತು ಅನರ್ಹ ಫಲಾನುಭವಿಗಳನ್ನು ಗುರುತಿಸುವ ಉದ್ದೇಶ ಹೊಂದಲಾಗಿದೆ. ಸರ್ವೆ ಆರಂಭವಾದ ಬಳಿಕ ಅನರ್ಹ ಫಲಾನುಭವಿಗಳನ್ನು ಪತ್ತೆಹಚ್ಚಿ, ನಂತರ ಅರ್ಹ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎನ್ನಲಾಗಿದೆ.
ಸರ್ವೆಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ಸರ್ಕಾರ ಸೂಚನೆ ನೀಡುವ ಸಾಧ್ಯತೆ ಇದೆ. ಆದರೆ ರಾಜ್ಯಾದ್ಯಂತ ದೊಡ್ಡ ಪ್ರಮಾಣದಲ್ಲಿ ಫಲಾನುಭವಿಗಳ ಮರುಪರಿಶೀಲನೆ ನಡೆಸಬೇಕಿರುವುದರಿಂದ ಕೇವಲ ಒಂದು ತಿಂಗಳಲ್ಲಿ ಸರ್ವೆ ಪೂರ್ಣಗೊಳಿಸುವುದು ಕಷ್ಟವಾಗಬಹುದು ಎನ್ನಲಾಗುತ್ತಿದೆ.
ಇದರ ನಡುವೆ ಸರ್ವೆ ನಡೆಯುವ ಅವಧಿಯಲ್ಲಿ ಗೃಹಲಕ್ಷ್ಮೀ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುತ್ತದೆಯೇ ಅಥವಾ ಸರ್ವೆ ಪೂರ್ಣಗೊಂಡ ಬಳಿಕವೇ ಹಣ ಪಾವತಿಯಾಗುತ್ತದೆಯೇ ಎಂಬ ಪ್ರಶ್ನೆ ಮೂಡಿದೆ.
ಸರ್ವೆ ಮುಗಿದು ಅರ್ಹ ಫಲಾನುಭವಿಗಳನ್ನು ಅಂತಿಮಗೊಳಿಸಿದ ಬಳಿಕವೇ ಗೃಹಲಕ್ಷ್ಮೀ ಹಣ ಪಾವತಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಈ ಕುರಿತು ಸರ್ಕಾರದ ಅಧಿಕೃತ ಮಾರ್ಗಸೂಚಿ ಬಿಡುಗಡೆಯಾದ ನಂತರವಷ್ಟೇ ಸಂಪೂರ್ಣ ಸ್ಪಷ್ಟತೆ ಸಿಗಲಿದೆ.
ಹೀಗಾಗಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಹೊಸ ಮಾರ್ಗಸೂಚಿ ಹಾಗೂ ಸರ್ಕಾರದ ಅಧಿಕೃತ ಪ್ರಕಟಣೆಯನ್ನು ಗಮನಿಸುವುದು ಅಗತ್ಯವಾಗಿದೆ.