ಬೆಂಗಳೂರಿನಲ್ಲಿ ಗಣೇಶೋತ್ಸವದ ಮೊದಲ ದಿನವೇ 1,84,628 ಗಣೇಶ ಮೂರ್ತಿಗಳ ವಿಸರ್ಜನೆ ನಡೆದಿದೆ. ಜಿಬಿಎ ವ್ಯಾಪ್ತಿಯ ಪಶ್ಚಿಮ ವಲಯದಲ್ಲಿ 1,20,079 ಮೂರ್ತಿಗಳು ವಿಸರ್ಜನೆ
ಬೆಂಗಳೂರು: ಗಣೇಶ ಚತುರ್ಥಿ ಹಬ್ಬದ ಸಂಭ್ರಮ ನಗರದಲ್ಲಿ ಮುಗಿಲುಮುಟ್ಟಿದ್ದು, ಉತ್ಸವದ ಮೊದಲ ದಿನವೇ ಬರೋಬ್ಬರಿ 1,84,628 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳಲ್ಲಿ ಪರಿಸರ ಸ್ನೇಹಿ ಹಾಗೂ ಸುರಕ್ಷಿತ ಗಣೇಶ ಮೂರ್ತಿ ವಿಸರ್ಜನೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಿಬಿಎ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಪಶ್ಚಿಮ ವಲಯದಲ್ಲೇ ಅತಿ ಹೆಚ್ಚು 1,20,079 ಮೂರ್ತಿಗಳು ವಿಸರ್ಜನೆಯಾಗಿವೆ.
ಸೆಂಟ್ರಲ್ ವಲಯದಲ್ಲಿ 28,860, ಉತ್ತರ ವಲಯದಲ್ಲಿ 16,857, ದಕ್ಷಿಣ ವಲಯದಲ್ಲಿ 10,372 ಹಾಗೂ ಪೂರ್ವ ವಲಯದಲ್ಲಿ 8,460 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.
ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ನಗರದ 42 ಪ್ರಮುಖ ಕೆರೆಗಳ ಆವರಣದಲ್ಲಿ ತಾತ್ಕಾಲಿಕ ಹಾಗೂ ಶಾಶ್ವತ ಕಲ್ಯಾಣಿಗಳನ್ನು ಸಿದ್ಧಪಡಿಸಲಾಗಿತ್ತು. ಇದರ ಜೊತೆಗೆ ವಾರ್ಡ್ ಮಟ್ಟದಲ್ಲಿ 659 ಸಂಚಾರಿ ಟ್ಯಾಂಕರ್ಗಳ ವ್ಯವಸ್ಥೆ ಮಾಡಲಾಗಿತ್ತು.
ಏಕಗವಾಕ್ಷಿ ಕೇಂದ್ರಗಳ ಮೂಲಕ ಅನುಮತಿ
ಸಾರ್ವಜನಿಕರು ಹಾಗೂ ಗಣೇಶ ಮಂಡಳಿಗಳ ಅನುಕೂಲಕ್ಕಾಗಿ ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳಲ್ಲಿ ಒಟ್ಟು 122 ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗಿತ್ತು. ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅಗತ್ಯ ಅನುಮತಿಗಳನ್ನು ತ್ವರಿತವಾಗಿ ನೀಡಲು ಈ ಕೇಂದ್ರಗಳ ಮೂಲಕ ವ್ಯವಸ್ಥೆ ಕಲ್ಪಿಸಲಾಗಿತ್ತು.
ವಿಸರ್ಜನಾ ಸ್ಥಳಗಳು ಹಾಗೂ ಸಂಚಾರಿ ಟ್ಯಾಂಕರ್ಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸಲು ಜಿಬಿಎ ತನ್ನ ಅಧಿಕೃತ ವೆಬ್ಸೈಟ್ನಲ್ಲೂ ವಿವರಗಳನ್ನು ಪ್ರಕಟಿಸಿತ್ತು.
ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಒತ್ತು
ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿರುವ ಜಿಬಿಎ, ಮಣ್ಣಿನ ಗಣಪತಿ ಮೂರ್ತಿಗಳ ಬಳಕೆಗೆ ಪ್ರೋತ್ಸಾಹ ನೀಡಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಮೂರ್ತಿಗಳ ಮಾರಾಟದ ಮೇಲೂ ನಿಗಾ ವಹಿಸಲಾಗಿದೆ.
ಕೆರೆಗಳ ನೀರು ಕಲುಷಿತವಾಗುವುದನ್ನು ತಡೆಯುವ ಉದ್ದೇಶದಿಂದ ಮೊಬೈಲ್ ಟ್ಯಾಂಕ್ಗಳ ಮೂಲಕ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲೂ ಗಣೇಶ ಮೂರ್ತಿ ವಿಸರ್ಜನೆ ಸುಸೂತ್ರವಾಗಿ ನಡೆಯಲು ಜಿಬಿಎ ಹಾಗೂ ಪೊಲೀಸರು ಅಗತ್ಯ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದಾರೆ.