ಬೆಂಗಳೂರಿನಲ್ಲಿ AI ಟ್ರಾಫಿಕ್ ಕ್ಯಾಮೆರಾ ಗಿಟಾರ್ ಬ್ಯಾಗ್ ಅನ್ನು ಹಿಂಬದಿ ಸವಾರ ಎಂದು ತಪ್ಪಾಗಿ ಗ್ರಹಿಸಿ, ಹೆಲ್ಮೆಟ್ ಧರಿಸಿಲ್ಲವೆಂದು ₹500 ದಂಡ ವಿಧಿಸಿದೆ.
ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆಗಳಿಂದ ಕೆಲವೊಮ್ಮೆ ವಿಚಿತ್ರ ತಪ್ಪುಗಳು ನಡೆಯುತ್ತಿರುವುದು ಬೆಳಕಿಗೆ ಬರುತ್ತಿದೆ. ಬೆಂಗಳೂರಿನಲ್ಲಿ ಇಂತಹದ್ದೇ ಒಂದು ಘಟನೆ ಇದೀಗ ಗಮನ ಸೆಳೆದಿದೆ.
ಸ್ಕೂಟರ್ನಲ್ಲಿ ಪ್ರಯಾಣಿಸುತ್ತಿದ್ದ ಸವಾರನೊಬ್ಬರ ಬೆನ್ನಿಗೆ ಕಟ್ಟಿಕೊಂಡಿದ್ದ ಗಿಟಾರ್ ಬ್ಯಾಗ್ ಅನ್ನು AI ಟ್ರಾಫಿಕ್ ಕ್ಯಾಮೆರಾ ಹಿಂಬದಿ ಸವಾರ ಎಂದು ತಪ್ಪಾಗಿ ಗುರುತಿಸಿದೆ. ಬಳಿಕ ಹಿಂಬದಿ ಸವಾರ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ₹500 ದಂಡದ ಚಲನ್ ಜಾರಿಯಾಗಿದೆ.
ಹೆಬ್ಬಾಳದಿಂದ ಟಿನ್ ಫ್ಯಾಕ್ಟರಿ ಕಡೆಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದ ಸೌವಿಕ್ ದತ್ತಾ ಅವರು ಬೆನ್ನಿಗೆ ಗಿಟಾರ್ ಬ್ಯಾಗ್ ಹಾಕಿಕೊಂಡಿದ್ದರು. ಔಟರ್ ರಿಂಗ್ ರಸ್ತೆಯಲ್ಲಿದ್ದ AI ಆಧಾರಿತ ಟ್ರಾಫಿಕ್ ಕ್ಯಾಮೆರಾ ಗಿಟಾರ್ ಬ್ಯಾಗ್ ಅನ್ನು ಹಿಂಬದಿ ಸವಾರ ಎಂದು ತಪ್ಪಾಗಿ ಗ್ರಹಿಸಿದೆ ಎನ್ನಲಾಗಿದೆ.
ಮರುದಿನ ಅವರ ಪತ್ನಿಯ ಮೊಬೈಲ್ಗೆ ದಂಡದ ಸಂದೇಶ ಬಂದಿದ್ದು, ಅದರಲ್ಲಿದ್ದ ಫೋಟೋ ನೋಡಿದ ಬಳಿಕ ಈ ವಿಚಿತ್ರ ಸಂಗತಿ ಬೆಳಕಿಗೆ ಬಂದಿದೆ.
ತಪ್ಪಾಗಿ ಜಾರಿಯಾದ ಚಲನ್ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸೌವಿಕ್ ದತ್ತಾ, ಬೆಂಗಳೂರು ಸಂಚಾರ ಪೊಲೀಸರ ಗಮನಕ್ಕೆ ತಂದು ದಂಡ ರದ್ದುಗೊಳಿಸುವಂತೆ ಮನವಿ ಮಾಡಿದ್ದಾರೆ.
ಘಟನೆ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದ ಬಳಿಕ ಸಂಚಾರ ವಿಭಾಗದ ಅಧಿಕಾರಿಗಳು ಪ್ರಕರಣವನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ತಪ್ಪು ಚಲನ್ ಆಗಿರುವುದು ದೃಢಪಟ್ಟರೆ ಅದನ್ನು ರದ್ದುಗೊಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
AI ಆಧಾರಿತ ಟ್ರಾಫಿಕ್ ಕ್ಯಾಮೆರಾಗಳಿಂದ ಇಂತಹ ತಪ್ಪುಗಳು ಸಂಭವಿಸಿದ ಸಂದರ್ಭದಲ್ಲಿ ಸಾರ್ವಜನಿಕರು ದೂರು ನೀಡಿದರೆ ಪ್ರಕರಣವನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.