ಆನೇಕಲ್ ಪೊಲೀಸರು ಅಕ್ರಮ ಗನ್ ಡೀಲಿಂಗ್ ನಡೆಸುತ್ತಿದ್ದ ಆರೋಪದ ಮೇಲೆ 7 ಮಂದಿಯನ್ನು ಬಂಧಿಸಿದ್ದಾರೆ.
ರಾಜ್ಯ ರಾಜಧಾನಿಯಲ್ಲಿ ಅಕ್ರಮ ಗನ್ ಡೀಲಿಂಗ್ ನಡೆಸುತ್ತಿದ್ದ ಆರೋಪದ ಮೇಲೆ ಆನೇಕಲ್ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ. ಇನ್ಸ್ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ಬಂಧಿತರ ಪೈಕಿ 6 ಮಂದಿ ರೌಡಿ ಶೀಟರ್ಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಪ್ರದೀಪ್ ರಮೇಶ್, ಮನೋಜ್ ಅಲಿಯಾಸ್ ಜಾಕಿ, ರಿಜ್ವಾನ್ ಪಾಷ ಅಲಿಯಾಸ್ ಕುಳ್ಳ ರಿಜ್ವಾನ್, ನಂಜಪ್ಪ ಅಲಿಯಾಸ್ ಡೆಡ್ಲಿ ನಂಜ, ವೆಂಕಟರಾಜು ಅಲಿಯಾಸ್ ತುಕಡಿ, ಗೋಪಿ ಅಲಿಯಾಸ್ ಸುಣವಾರ ಗೋಪಿ ಹಾಗೂ ಶಿವರಾಜ್ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 5 ಕಂಟ್ರಿ ಮೇಡ್ ಪಿಸ್ತೂಲ್ ಹಾಗೂ 10 ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಕ್ರಮ ಶಸ್ತ್ರಾಸ್ತ್ರ ಜಾಲದ ಹಿಂದೆ ಮತ್ತಷ್ಟು ವ್ಯಕ್ತಿಗಳ ಸಂಪರ್ಕ ಇರುವ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಗನ್ ಡೀಲಿಂಗ್ ಬಯಲಾಗಿದ್ದು ಹೇಗೆ?
ಕಳೆದ ತಿಂಗಳ 14ರಂದು ಆನೇಕಲ್ ಸಮೀಪದ ಹಾಲ್ದೇನಹಳ್ಳಿ ರೈಲ್ವೆ ಹಾಲ್ಟ್ ಬಳಿ ಅನುಮಾನಾಸ್ಪದವಾಗಿ ಬ್ಯಾಗ್ ಹಿಡಿದು ನಿಂತಿದ್ದ ಕೆಲವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಪರಿಶೀಲಿಸಿದ್ದಾರೆ. ಈ ವೇಳೆ 3 ಕಂಟ್ರಿ ಮೇಡ್ ಪಿಸ್ತೂಲ್ ಹಾಗೂ 10 ಗುಂಡುಗಳು ಪತ್ತೆಯಾಗಿವೆ.
ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮ ಗನ್ ಮಾರಾಟದ ಜಾಲದ ಕುರಿತು ಮಾಹಿತಿ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಪ್ರದೇಶದಿಂದ ಗನ್ ಸಪ್ಲೈ?
ತನಿಖೆಯ ವೇಳೆ ಮಧ್ಯಪ್ರದೇಶದ ಬೇಡಘಾಟ್ ಗ್ರಾಮದ ದಾವೂದ್ ಎಂಬಾತ ಗನ್ ಸಪ್ಲೈ ಜಾಲದ ಪ್ರಮುಖ ವ್ಯಕ್ತಿ ಎಂದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಾವೂದ್, ಪ್ರದೀಪ್ ರಮೇಶ್ ಮೂಲಕ ರೈಲಿನಲ್ಲಿ ಆನೇಕಲ್ಗೆ ಗನ್ಗಳನ್ನು ಕಳುಹಿಸಿದ್ದ ಎನ್ನಲಾಗಿದೆ.
ಇದೇ ವೇಳೆ ಕುಳ್ಳ ರಿಜ್ವಾನ್ ಹಾಗೂ ಮನೋಜ್ ಅಲಿಯಾಸ್ ಜಾಕಿಗೆ ತಲಾ ಒಂದೊಂದು ಪಿಸ್ತೂಲ್ ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಸದ್ಯ 7 ಮಂದಿಯನ್ನು ಬಂಧಿಸಲಾಗಿದ್ದು, ಗನ್ ಸಪ್ಲೈಯರ್ ಹಾಗೂ ಆತನೊಂದಿಗೆ ಸಂಪರ್ಕ ಹೊಂದಿರುವ ಇತರ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಮುಂದುವರಿಸಿದ್ದಾರೆ.