Bengaluru : ಪೀಣ್ಯದ ಗುಲ್ಬರ್ಗ ಕಾಲೋನಿಯಲ್ಲಿ ಎರಡು ಗುಂಪುಗಳ ನಡುವಿನ ಗಲಾಟೆ ರೌಡಿಶೀಟರ್‌ ಒಬ್ಬನ ಸಾವಿನಲ್ಲಿ ಅಂತ್ಯವಾಗಿದೆ. ದೀಪಕ್ ಅಲಿಯಾಸ್ ದೀಪು ಎಂಬಾತ ಹತ್ಯೆಯಾದ ವ್ಯಕ್ತಿ. ಈತ ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿಶೀಟರ್‌ ಎಂದು ತಿಳಿದುಬಂದಿದೆ.


ಎರಡು ದಿನಗಳ ಹಿಂದೆ ದೀಪು, ಈಶ್ವರ್ ನೇಪಾಳಿ ಹಾಗೂ ಸುಮನ್ ಅಲಿಯಾಸ್ ಪಾರಿವಾಳ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 27ರ ರಾತ್ರಿ ದೀಪು ಮೇಲೆ 7-8 ಜನರ ಗುಂಪು ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ.


ದಾಳಿಯಲ್ಲಿ ದೀಪುಗೆ ಚಾಕುವಿನಿಂದ ಇರಿತವಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.