ಬೆಂಗಳೂರಿನ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯ ವಿದ್ಯಾಪೀಠ ಸರ್ಕಲ್ ಬಳಿ ₹600 ಹಣದ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಮಂಜು ಅಲಿಯಾಸ್ ಕೋಳಿ ಮಂಜು ಮೃತಪಟ್ಟಿದ್ದಾರೆ.
ಕೇವಲ ₹600 ಹಣದ ವಿಚಾರಕ್ಕೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾಪೀಠ ಸರ್ಕಲ್ ಬಳಿ ನಡೆದಿದೆ. ಮಂಜು ಅಲಿಯಾಸ್ ಕೋಳಿ ಮಂಜು ಮೃತಪಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪಳನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮಂಜು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. ಪಳನಿ ತನ್ನ ಮೊಬೈಲ್ ಫೋನ್ ಅನ್ನು ಮಂಜು ಬಳಿ ಅಡವಿಟ್ಟು ಹಣ ಪಡೆದಿದ್ದ. ಮೊಬೈಲ್ ವಾಪಸ್ ಪಡೆಯುವ ಹಾಗೂ ಹಣದ ವಿಚಾರವಾಗಿ ಇಬ್ಬರ ನಡುವೆ ಬಾರ್ ಬಳಿ ಜಗಳ ಆರಂಭವಾಗಿತ್ತು ಎಂದು ವರದಿಯಾಗಿದೆ.
ಈ ವೇಳೆ ಮಾತಿಗೆ ಮಾತು ಬೆಳೆದು, ಪಳನಿ ದೊಣ್ಣೆಯಿಂದ ಮಂಜು ಅವರ ತಲೆಯ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಗಂಭೀರವಾಗಿ ಗಾಯಗೊಂಡ ಮಂಜು ಮೃತಪಟ್ಟಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ಸಿ.ಕೆ. ಅಚ್ಚುಕಟ್ಟು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ.