Bengaluru : ಕೆಂಗೇರಿ ಸಮೀಪದ ಆರ್.ಆರ್. ಮೆಡಿಕಲ್ ಕಾಲೇಜು ಹಿಂಭಾಗ ಆನೆ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಅಂಚೆಪಾಳ್ಯ ಗ್ರಾಮದ ನಾಗರಾಜ್ ಮೃತ ವ್ಯಕ್ತಿ ಎಂದು ತಿಳಿದುಬಂದಿದೆ.

ಇಂದು ಬೆಳಗಿನ ಜಾವ ಸುಮಾರು 5 ಗಂಟೆಗೆ ಘಟನೆ ನಡೆದಿದೆ. ವಾಕಿಂಗ್‌ಗೆ ತೆರಳಿದ್ದ ನಾಗರಾಜ್ ಮೇಲೆ ಆನೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳದಲ್ಲಿದ್ದ ಎರಡು ಕಾಂಪೌಂಡ್‌ಗಳು ಉರುಳಿಬಿದ್ದಿದ್ದು, ಸ್ಥಳೀಯರು ಕೂಡ ಆನೆ ದಾಳಿಯಿಂದಲೇ ಘಟನೆ ಸಂಭವಿಸಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.


ಇನ್ನು ಘಟನಾ ಸ್ಥಳದ ಸಮೀಪದ ಸಿಸಿಟಿವಿ ದೃಶ್ಯಗಳಲ್ಲಿ ಆನೆ ಓಡಾಡಿರುವುದು ಪತ್ತೆಯಾಗಿದೆ. ಬೆಳಗ್ಗೆ 5 ಗಂಟೆ 11 ನಿಮಿಷಕ್ಕೆ ಆನೆ ವೇಗವಾಗಿ ಓಡುತ್ತಿರುವ ದೃಶ್ಯ ಸೆರೆಯಾಗಿದೆ. ಇದೇ ರಸ್ತೆಯಲ್ಲಿ ಜಾಗಿಂಗ್ ಮಾಡುತ್ತಿದ್ದ ಮತ್ತೊಬ್ಬ ವ್ಯಕ್ತಿ ಕೆಲವೇ ಸೆಕೆಂಡ್‌ಗಳ ಅಂತರದಲ್ಲಿ ಆನೆ ದಾಳಿಯಿಂದ ಪಾರಾಗಿರುವುದು ತಿಳಿದುಬಂದಿದೆ.


ಘಟನೆಯ ಬಳಿಕ ಕೆಂಗೇರಿ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ. ಆನೆ ನಗರ ಪ್ರದೇಶಕ್ಕೆ ಹೇಗೆ ಬಂದಿತು ಹಾಗೂ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಕೈಗೊಳ್ಳುವ ಕ್ರಮಗಳ ಬಗ್ಗೆ ಸ್ಥಳೀಯರಲ್ಲಿ ಕುತೂಹಲ ಮೂಡಿದೆ.