ಬೆಂಗಳೂರಿನ ಹೆಬ್ಬಾಳ ಕೆಂಪಾಪುರದಲ್ಲಿ 25 ವರ್ಷದ ಜಿಮ್ ಟ್ರೈನರ್ ನಂದನ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಬೆಂಗಳೂರು: ನಗರದ ಹೆಬ್ಬಾಳ ಕೆಂಪಾಪುರದಲ್ಲಿ ಜಿಮ್ ಟ್ರೈನರ್ ಒಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತರನ್ನು 25 ವರ್ಷದ ನಂದನ್ ಎಂದು ಗುರುತಿಸಲಾಗಿದೆ.
ಶನಿವಾರ ಜಿಮ್ನ ಮೊದಲ ವರ್ಷದ ಆ್ಯನಿವರ್ಸರಿ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮಕ್ಕೆ ತೆರಳುವ ಮುನ್ನ ತಡವಾದರೆ ಬೆಳಗ್ಗೆ ಮನೆಗೆ ಬರುವುದಾಗಿ ನಂದನ್ ಮನೆಯವರಿಗೆ ತಿಳಿಸಿದ್ದರು ಎನ್ನಲಾಗಿದೆ.
ಆ್ಯನಿವರ್ಸರಿ ಕಾರ್ಯಕ್ರಮ ಮುಗಿದ ಬಳಿಕ ನಂದನ್, ಇತರೆ ಸಿಬ್ಬಂದಿಯೊಂದಿಗೆ ಪರಿಚಿತರೊಬ್ಬರ ಅಪಾರ್ಟ್ಮೆಂಟ್ಗೆ ತೆರಳಿದ್ದರು. ಈ ವೇಳೆ ಅಪಾರ್ಟ್ಮೆಂಟ್ನಲ್ಲಿ ಗಲಾಟೆ ನಡೆದಿದ್ದು, ನಂದನ್ ಮೇಲೆ ಹಲ್ಲೆ ನಡೆದಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಬಳಿಕ ನಂದನ್ ಅವರನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ. ವಿಷಯ ತಿಳಿದು ಆಸ್ಪತ್ರೆಗೆ ತೆರಳಿದ ನಂದನ್ ಅವರ ತಾಯಿ ಮಂಜುಳಾ, ಮಗನ ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿವೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಅಪಾರ್ಟ್ಮೆಂಟ್ನಲ್ಲಿ ಗಲಾಟೆ ನಡೆದು ನಂದನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಂಜುಳಾ ನೀಡಿದ ದೂರಿನ ಆಧಾರದ ಮೇಲೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ನಂದನ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಹಲ್ಲೆ ನಡೆದಿದೆಯೇ ಹಾಗೂ ಸಾವಿಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.