Bengaluru ಉತ್ತರ ತಾಲೂಕಿನ ಹೆಸರಘಟ್ಟ ಕೆರೆಯಲ್ಲಿ ಈಜಲು ತೆರಳಿದ್ದ 20 ವರ್ಷದ ಕಾಲೇಜು ವಿದ್ಯಾರ್ಥಿ ಹರ್ಷ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
Bengaluru : ಸ್ನೇಹಿತರೊಂದಿಗೆ ಹೆಸರಘಟ್ಟ ಕೆರೆಗೆ ತೆರಳಿದ್ದ ಕಾಲೇಜು ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ ನಡೆದಿದೆ. ಕಾಮಾಕ್ಷಿಪಾಳ್ಯದ ವಿಶ್ವನಾಥ್ ಮತ್ತು ಭವ್ಯ ದಂಪತಿಯ ಪುತ್ರ ಹರ್ಷ (20) ಮೃತಪಟ್ಟ ವಿದ್ಯಾರ್ಥಿ.
ಸೋಮವಾರ ಮನೆಯಲ್ಲಿ ಪೂಜೆ ಮುಗಿಸಿದ ಹರ್ಷ, ಕಾಲೇಜಿನಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿರುವುದಾಗಿ ತಾಯಿಗೆ ತಿಳಿಸಿ ಮನೆಯಿಂದ ಹೊರಟಿದ್ದನು. ಬಳಿಕ ಸ್ನೇಹಿತರೊಂದಿಗೆ ಹೆಸರಘಟ್ಟ ಕೆರೆಗೆ ತೆರಳಿದ್ದ ಆತ, ಈಜಲು ನೀರಿಗೆ ಇಳಿದಿದ್ದಾನೆ. ಈ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಘಟನೆಯ ಮಾಹಿತಿ ತಿಳಿದ ಸೋಲದೇವನಹಳ್ಳಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿದರು. ಬಳಿಕ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ನೆರವಿನಿಂದ ಹರ್ಷನ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಯಿತು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.