ಸೆಪ್ಟೆಂಬರ್ 16ರ ವಿಶ್ವ ಕ್ಷೌರಿಕರ ದಿನಾಚರಣೆ ಅಂಗವಾಗಿ ಬೇಲೂರಿನ ಕ್ಷೌರಿಕ ಸಂಘದಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಬೇಲೂರು: ಸೆಪ್ಟೆಂಬರ್ 16ರಂದು ಆಚರಿಸಲಾಗುವ ವಿಶ್ವ ಕ್ಷೌರಿಕರ ದಿನಾಚರಣೆ ಅಂಗವಾಗಿ ಬೇಲೂರಿನ ಕ್ಷೌರಿಕ ಸಂಘದ ವತಿಯಿಂದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವವರನ್ನು ಹಾಗೂ ಉತ್ತಮ ಅಂಕ ಗಳಿಸುವ ವಿದ್ಯಾರ್ಥಿಗಳನ್ನು ಗೌರವಿಸುತ್ತಾ ಬಂದಿರುವ ಶ್ರೀ ಲಕ್ಷ್ಮಿ ಮಂಗಳವಾದ್ಯ ಮತ್ತು ಸಂಗೀತ ಕಲಾ ಸೇವಾ ಟ್ರಸ್ಟ್ ಅಧ್ಯಕ್ಷ ನರಸಿಂಹ ಹಾಗೂ ಕ್ಷೌರಿಕ ಸಂಘದ ಪದಾಧಿಕಾರಿಗಳು, ಪತ್ರಿಕಾರಂಗದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಮಾಧ್ಯಮ ಪತ್ರಕರ್ತರ ಸಂಘದ ಸದಸ್ಯರಾದ ಸೋಮಶೇಖರ್ ವೈ.ಎಸ್. ಹಾಗೂ ಅರುಣ್ ರಜಪೂತ್ ಅವರನ್ನು ಗೌರವಿಸಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ನರಸಿಂಹ, 1906ರಲ್ಲಿ ಫ್ರಾನ್ಸ್ನಲ್ಲಿ ಆರಂಭವಾದ ವಿಶ್ವ ಕ್ಷೌರಿಕರ ದಿನಾಚರಣೆ ಇಂದಿಗೂ ವಿವಿಧೆಡೆ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದ ಯಶಸ್ಸಿಗೆ ಸಂಘದ ಸದಸ್ಯರು ಕೂಡ ಕೈಜೋಡಿಸುತ್ತಾ ಬಂದಿದ್ದಾರೆ ಎಂದರು.
ಪತ್ರಿಕಾರಂಗದಲ್ಲಿ ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಸೋಮಶೇಖರ್ ವೈ.ಎಸ್. ಹಾಗೂ ಅರುಣ್ ರಜಪೂತ್ ಅವರನ್ನು ಸನ್ಮಾನಿಸಲು ಸಂತೋಷ ಮತ್ತು ಹೆಮ್ಮೆ ಇದೆ ಎಂದು ನರಸಿಂಹ ಹೇಳಿದರು.
ಕಾರ್ಯಕ್ರಮದಲ್ಲಿ ಮಾಧ್ಯಮ ಪತ್ರಕರ್ತರ ಸಂಘದ ಅಧ್ಯಕ್ಷ ಬಸವರಾಜ್ ಸೇರಿದಂತೆ ಪತ್ರಕರ್ತರು ಹಾಗೂ ಕ್ಷೌರಿಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.