ಮಂಡ್ಯದ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ನಿಯಂತ್ರಣ ತಪ್ಪಿದ ಕಾರು ಫ್ಲೈಓವರ್‌ನಿಂದ ಅಂಡರ್‌ಪಾಸ್‌ಗೆ ಬಿದ್ದು ಸಾಫ್ಟ್‌ವೇರ್ ಉದ್ಯಮಿ ಪತ್ನಿ ಅಂಜನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಫ್ಲೈಓವರ್‌ನಿಂದ ಕಾರು ಕೆಳಕ್ಕೆ ಉರುಳಿ ಬಿದ್ದು ಸಾಫ್ಟ್‌ವೇರ್ ಉದ್ಯಮಿಯೊಬ್ಬರ ಪತ್ನಿ ದಾರುಣವಾಗಿ ಸಾವನ್ನಪ್ಪಿದ್ದಾರೆ!


ಮಂಡ್ಯದ ಉಮ್ಮಡಹಳ್ಳಿ ಗೇಟ್ ಸಮೀಪ ಈ ದುರ್ಘಟನೆ ನಡೆದಿದೆ. ಬೆಂಗಳೂರಿನಿಂದ ಮೈಸೂರಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅತಿವೇಗದಿಂದ ಬಂದ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ರಭಸಕ್ಕೆ ಫ್ಲೈಓವರ್‌ನಿಂದ ಹಾರಿದ ಕಾರು ನೇರವಾಗಿ ಅಂಡರ್‌ಪಾಸ್‌ಗೆ ಬಿದ್ದಿದೆ.


ಮೃತರನ್ನು 32 ವರ್ಷದ ಅಂಜನಾ ಎಂದು ಗುರುತಿಸಲಾಗಿದೆ. ಇವರು ಮೈಸೂರಿನಲ್ಲಿ ಸಾಫ್ಟ್‌ವೇರ್ ಕಂಪನಿ ಹೊಂದಿರುವ ಹರೀಶ್ ಎಂಬುವವರ ಪತ್ನಿ. ಅಪಘಾತ ಸಂಭವಿಸಿದಾಗ ಅಂಜನಾ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.


ಕಾರು ಅಂಡರ್‌ಪಾಸ್‌ಗೆ ಬೀಳುವಾಗ ಕಿಟಕಿ ತೆರೆದುಕೊಂಡಿದ್ದರಿಂದ ಅಂಜನಾ ಹೊರಗೆ ಬಿದ್ದು ತಲೆಗೆ ಗಂಭೀರ ಪೆಟ್ಟಾಗಿದೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ದುರಂತ ಸಂಭವಿಸಿದೆ.