ಬೆಂಗಳೂರು ಹೊರವಲಯ ಜಿಗಣಿ ಬಳಿಯ ಯಲ್ಲಮ್ಮನ ದೊಡ್ಡಯ್ಯ ಕಲ್ಲು ಕ್ವಾರಿಯಲ್ಲಿ ಟ್ರೆಕ್ಕಿಂಗ್‌ಗೆ ತೆರಳಿದ್ದ ಟೆಕ್ಕಿಯೊಬ್ಬರು ಈಜಲು ಹೋದ ವೇಳೆ ನಾಪತ್ತೆಯಾಗಿದ್ದಾರೆ. 

ಬೆಂಗಳೂರು: ಟ್ರೆಕ್ಕಿಂಗ್‌ಗೆ ತೆರಳಿದ್ದ ಟೆಕ್ಕಿಯೊಬ್ಬರು ಕಲ್ಲು ಕ್ವಾರಿಯ ನೀರಿನಲ್ಲಿ ಈಜಲು ತೆರಳಿದ ವೇಳೆ ನಾಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯದ ಜಿಗಣಿ ಬಳಿಯ ಯಲ್ಲಮ್ಮನ ದೊಡ್ಡಯ್ಯ ಕಲ್ಲು ಕ್ವಾರಿಯಲ್ಲಿ ನಡೆದಿದೆ.

ನಾಪತ್ತೆಯಾಗಿರುವವರನ್ನು ಆಂಧ್ರ ಪ್ರದೇಶ ಮೂಲದ ವಿನಯ್ (30) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಹಲಸೂರಿನಲ್ಲಿ ವಾಸವಾಗಿದ್ದ ವಿನಯ್ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದರು ಎನ್ನಲಾಗಿದೆ.


ಗಾಂಧಿ ಜಯಂತಿ ರಜೆ ಹಿನ್ನೆಲೆಯಲ್ಲಿ ಎಂಟು ಮಂದಿ ಟ್ರೆಕ್ಕಿಂಗ್‌ಗೆ ತೆರಳಿದ್ದರು. BLR Hike ಎಂಬ ಇನ್‌ಸ್ಟಾಗ್ರಾಂ ಗ್ರೂಪ್ ಮೂಲಕ ತಂಡ ಟ್ರೆಕ್ಕಿಂಗ್‌ಗಾಗಿ ತೆರಳಿತ್ತು ಎಂದು ತಿಳಿದುಬಂದಿದೆ.

ಶುಕ್ರವಾರ ಸಂಜೆ ಸುಮಾರು 5:30ರ ವೇಳೆಗೆ ತಂಡ ಕಲ್ಲು ಕ್ವಾರಿಯ ನೀರಿನಲ್ಲಿ ಈಜಲು ತೆರಳಿತ್ತು. ಈ ವೇಳೆ ವಿನಯ್ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.


ಘಟನೆ ಬಳಿಕ ತಂಡದಲ್ಲಿದ್ದವರು ನೀರಿನಿಂದ ಹೊರಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಜಿಗಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಅಗ್ನಿಶಾಮಕ ಸಿಬ್ಬಂದಿಯೂ ಸ್ಥಳಕ್ಕೆ ಆಗಮಿಸಿ ವಿನಯ್‌ಗಾಗಿ ಶೋಧಕಾರ್ಯ ಆರಂಭಿಸಿದ್ದಾರೆ.

ಶುಕ್ರವಾರ ಸಂಜೆಯಿಂದಲೇ ಶೋಧಕಾರ್ಯ ಮುಂದುವರಿದಿದ್ದು, ವಿನಯ್‌ಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಕುಟುಂಬಸ್ಥರು ಹಾಗೂ ಸಂಬಂಧಿಕರು ಆತಂಕದಲ್ಲಿದ್ದು, ಶೋಧ ಕಾರ್ಯ ಮುಂದುವರಿದಿದೆ.