Ballari ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿದ ಲಾರಿ ಪುಟ್‌ಪಾತ್ ಮೇಲೆ ನುಗ್ಗಿದ ಪರಿಣಾಮ 48 ವರ್ಷದ ಮಹಾದೇವಿ ಮೃತಪಟ್ಟಿದ್ದಾರೆ. 

Ballari : ಪುಟ್‌ಪಾತ್ ಮೇಲೆ ನಿಂತಿದ್ದವರ ಮೇಲೆ ನಿಯಂತ್ರಣ ತಪ್ಪಿದ ಲಾರಿ ಹರಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದ ಬಳಿ ನಡೆದಿದೆ.

ಮೃತರನ್ನು 48 ವರ್ಷದ ಮಹಾದೇವಿ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಸುನೀತಾ, ಪೂಜಾರಿ ಜೆಡೆಮ್ಮ ಹಾಗೂ ಗಗನ್ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಟ್ರಾಮಾಕೇರ್ ಕೇಂದ್ರಕ್ಕೆ ದಾಖಲಿಸಲಾಗಿದೆ.


ರಾತ್ರಿ ವೇಳೆ ಸೋಮಸಮುದ್ರ ಗ್ರಾಮದ ಬೇಕರಿಯೊಂದರ ಮುಂಭಾಗದ ಪುಟ್‌ಪಾತ್ ಮೇಲೆ ನಾಲ್ವರು ನಿಂತು ಮಾತನಾಡುತ್ತಿದ್ದರು. ಈ ವೇಳೆ ಹೆದ್ದಾರಿಯಲ್ಲಿ ವೇಗವಾಗಿ ಬಂದ ಲಾರಿ ನಿಯಂತ್ರಣ ತಪ್ಪಿ ಪುಟ್‌ಪಾತ್‌ಗೆ ನುಗ್ಗಿ ನಾಲ್ವರಿಗೂ ಡಿಕ್ಕಿ ಹೊಡೆದಿದೆ.


ಅಪಘಾತದ ಪರಿಣಾಮ ಮಹಾದೇವಿ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಮೂವರು ಗಾಯಗೊಂಡಿದ್ದಾರೆ. ಘಟನೆಯ ದೃಶ್ಯಗಳು ಸಮೀಪದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.


ಮಾಹಿತಿ ತಿಳಿದು ಸ್ಥಳಕ್ಕೆ ಕುರುಗೋಡು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.