ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದ ಬಳಿ ವೇದಾವತಿ ನದಿಯಲ್ಲಿ ಈಜಲು ತೆರಳಿದ್ದ 15 ವರ್ಷದ ಓಂ ಪ್ರಸಾದ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಬಳ್ಳಾರಿ: ವೇದಾವತಿ ನದಿಯಲ್ಲಿ ಈಜಲು ತೆರಳಿದ್ದ 15 ವರ್ಷದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸಿರಗುಪ್ಪ ತಾಲೂಕಿನ ರಾರಾವಿ ಗ್ರಾಮದ ಬಳಿ ನಡೆದಿದೆ.
ಮೃತ ಬಾಲಕ ಓಂ ಪ್ರಸಾದ್ 10ನೇ ತರಗತಿಯಲ್ಲಿ ಓದುತ್ತಿದ್ದು, ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಸ್ನೇಹಿತರೊಂದಿಗೆ ನದಿಗೆ ಈಜಲು ತೆರಳಿದ್ದ ಎನ್ನಲಾಗಿದೆ.
ನೀರಿನ ಆಳ ಅರಿಯದೇ ನದಿಗೆ ಇಳಿದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಬಾಲಕ ಮುಳುಗಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಶೋಧ ಕಾರ್ಯ ಆರಂಭಿಸಿದ್ದರು.
ಶೋಧ ಕಾರ್ಯಾಚರಣೆಯಲ್ಲಿ ಇಂದು ಬೆಳಗ್ಗೆ ಬಾಲಕನ ಮೃತದೇಹ ಪತ್ತೆಯಾಗಿದೆ. ಘಟನೆ ಸಂಬಂಧ ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.